•ಮಾನವ ಕುಲಕ್ಕೆ ಅಮ್ಮ ದೈವಿಕ ರಾಯಭಾರಿ: ಡಾ.ಸಿ.ಎನ್.ಮಂಜುನಾಥ್


ಮಾನವ ಕುಲಕ್ಕೆ ಅಮ್ಮ ದೈವಿಕ ರಾಯಭಾರಿ: ಡಾ.ಸಿ.ಎನ್.ಮಂಜುನಾಥ್
ಮೈಸೂರು: ಅಮ್ಮನನ್ನು ಮಾನವಕುಲಕ್ಕೆ ಮಾರ್ಗದರ್ಶನ ನೀಡುವ ದೈವಿಕ ರಾಯಭಾರಿ. ಒಂದು ಸಣ್ಣ ಹಳ್ಳಿಯಿಂದ ಜಾಗತಿಕ ಆಧ್ಯಾತ್ಮಿಕ ಆಧ್ಯಾತ್ಮಿಕತೆಯ ಪ್ರತೀಕವಾಗಿ ಬೆಳೆದ ಅವರ ಪಯಣವು ಸೇವೆಯ ಮಹತ್ವವನ್ನು ಸಾರುತ್ತದೆ ಎಂದು ಹೃದ್ರೋಗ ತಜ್ಞ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ನಗರದ ಬೋಗಾದಿಯ ಶ್ರೀ ಮಾತಾ ಅಮೃತಾನಂದಮಯಿ ಸಂಸ್ಥೆಯ ಅಮೃತಕೃಪಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ೧೦೦ ಹಾಸಿಗೆಗಳ ಬ್ಲಾಕ್ನ್ನು ಡಿಜಿಟಲ್ಲಾಗಿ ಉದ್ಘಾಟಿಸಿದ ಬಳಿಕ ಮಾತನಾಡಿದರು. ಅಮ್ಮನ ಜೀವನ ಮತ್ತು ಮಾನವೀಯ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ಅವರು, ಕರುಣೆ, ನಿಸ್ವಾರ್ಥ ಸೇವೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಪರಿವರ್ತನಾತ್ಮಕ ಶಕ್ತಿಯನ್ನು ಒತ್ತಿಹೇಳಿದರು.
ಸಾಕ್ಷರತೆಯೊಂದಿಗೆ ಮೌಲ್ಯಗಳು ಮತ್ತು ಸಂಸ್ಕಾರವೂ ಬೆರೆತಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿ ಸಾಧ್ಯ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಅಮ್ಮ ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿದರು. ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರಕಿಸುವ ಅವರ ಪ್ರಯತ್ನಗಳನ್ನು ಪ್ರಶಂಸಿಸಿದರು. ಯುವಜನರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಆರೋಗ್ಯಕರ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ಯೋಗ ಮತ್ತು ವ್ಯಾಯಾಮವನ್ನು ಅಭ್ಯಾಸ ಮಾಡಬೇಕು ಹಾಗೂ ಸಣ್ಣಪುಟ್ಟ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಜೀವನ ಕ್ಷಣಿಕವೆಂದು ನೆನಪಿಸಿದ ಅವರು, ಪ್ರತಿಯೊಬ್ಬರೂ ತಮ್ಮ ಬದುಕನ್ನು ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬಡವರಿಗೆ ವಸತಿ ಒದಗಿಸುವುದು ಹಾಗೂ ಕಾರಾಗೃಹದ ಕೈದಿಗಳು ಸೇರಿ ಸಮಾಜದ ಎಲ್ಲ ವರ್ಗದವರಿಗೆ ಯೋಗ ಮತ್ತು ಆಧ್ಯಾತ್ಮಿಕ ಬೋಧನೆಗಳನ್ನು ಪರಿಚಯಿಸುವುದು ಸೇರಿದಂತೆ ಅಮ್ಮನ ಮಾನವೀಯ ಮತ್ತು ಆಧ್ಯಾತ್ಮಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಗ್ರಾಮೀಣ ಮಹಿಳಾ ಸಬಲೀಕರಣ ಕಾರ್ಯಕ್ರಮದಡಿ ೫೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ೨೫೦ ಮಹಿಳೆಯರಿಗೆ ಸೀರೆ ಮತ್ತು ಆರ್ಥಿಕ ನೆರವು ವಿತರಿಸಲಾಯಿತು. ಅಮ್ಮನವರ ಸತ್ಸಂಗ, ಭಜನೆ, ಮಾರ್ಗದರ್ಶಿತ ಧ್ಯಾನ, ಆರತಿ ಮತ್ತು ದರ್ಶನ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆದವು. ಬ್ರಹ್ಮಸ್ಥಾನಂ ದೇವಸ್ಥಾನದಲ್ಲಿ ಶನಿ ದೋಷ ನಿವಾರಣ ಪೂಜೆ, ರಾಹು ದೋಷ ನಿವಾರಣ ಪೂಜೆ, ಉದಯಾಸ್ತಮಾನ ಪೂಜೆ, ಗಣಪತಿ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ಸುದರ್ಶನ ಹೋಮ ಹಾಗೂ ದೇವಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಕಾರ್ಯಕ್ರಮದ ಅಂಗವಾಗಿ ಅನ್ನದಾನವೂ ನಡೆಯಿತು.
ಶಾಸಕ ಟಿ.ಎಸ್.ಶ್ರೀವತ್ಸ, ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಮಹಾರಾಜ ಎಜುಕೇಷನ್ ಟ್ರಸ್ಟ್ನ ಉಪಾಧ್ಯಕ್ಷ ಪ್ರೊ.ಜಿ.ಹೇಮಂತ್ ಕುಮಾರ್, ಹಿರಿಯ ವಕೀಲ ಓ.ಶ್ಯಾಮ ಭಟ್, ಅರುಬಾದ ಕ್ಸೇವಿಯರ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನ ಹೃದ್ರೋಗ ಅರಿವಳಿಕೆ ತಜ್ಞ ಹಾಗೂ ಕ್ಲಿನಿಕಲ್ ಮೆಡಿಸಿನ್ ಪ್ರಾಧ್ಯಾಪಕ ಡಾ.ಪಿ.ಕೆ.ಪ್ರಹ್ಲಾದ್, ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅನಂತ್ ಹೆಗ್ಡೆ, ಆಟೋಮೋಟಿವ್ ಆಕ್ಸಲ್ಸ್ ಲಿಮಿಟೆಡ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಗಾರ್ಗೇಶ್ವರಿ, ಕೊಚ್ಚಿಯ ಅಮೃತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಕುಮಾರ್ ಸೇರಿ ಅನೇಕರು ಉಪಸ್ಥಿತರಿದ್ದರು.
ಸಹಮಾನವರೊಂದಿಗೆ ಸಹಕಾರ, ಪ್ರಕೃತಿಯೊಂದಿಗೆ ಸಹಬಾಳ್ವೆ ಮತ್ತು ಭಗವಂತನೊಂದಿಗೆ ಆಧ್ಯಾತ್ಮಿಕ ಅನುಸಂಧಾನ ಮುಖ್ಯ. ಜನರು ಮತ್ತು ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಮಾತುಕತೆ ಮತ್ತು ರಾಜಿಯ ಮೂಲಕ ಬಗೆಹರಿಸಬಹುದಾದರೂ, ಪ್ರಕೃತಿಯೊಂದಿಗಿನ ಮಾನವನ ಸಂಬಂಧಕ್ಕೆ ವಿನಯ, ಪ್ರೇಮ ಮತ್ತು ಗೌರವ ಅಗತ್ಯ. ಭೂಮಿ ಮತ್ತು ಅದರ ಸಂಪನ್ಮೂಲಗಳನ್ನು ಎಲ್ಲ ಜೀವಿಗಳೊಂದಿಗೆ ಜವಾಬ್ದಾರಿಯುತವಾಗಿ ಹಂಚಿಕೊಳ್ಳಬೇಕಿದೆ. ವಿಶ್ವವ್ಯಾಪಿ ಕರುಣೆ ಮತ್ತು ಸಮಾನ ದೃಷ್ಟಿಕೋನದ ಮೂಲಕ ಸಾಮರಸ್ಯವನ್ನು ಪುನಃಸ್ಥಾಪಿಸಿ, ಶಾಂತಿಯುತ ಮತ್ತು ಸಮಾನತೆಯ ಜಗತ್ತನ್ನು ನಿರ್ಮಿಸುವತ್ತ ಸಾಗಬೇಕಿದೆ.
– ಶ್ರೀ ಮಾತಾ ಅಮೃತಾನಂದಮಯಿ
