ಪ್ರಪಂಚದ ಅತ್ಯಂತ ಶ್ರೀಮಂತ ಹಾಗೂ ಇತಿಹಾಸ ಹೊಂದಿರುವ ಭಾಷೆ ಕನ್ನಡ – ಹೆಚ್. ಎನ್. ಸುಧಾಕರ್
ಪಿರಿಯಾಪಟ್ಟಣ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ
ಪಿರಿಯಾಪಟ್ಟಣ: ಪ್ರಪಂಚದ ಅತ್ಯಂತ ಶ್ರೀಮಂತ ಹಾಗೂ ಇತಿಹಾಸ ಹೊಂದಿರುವ ಭಾಷೆ ಕನ್ನಡ ಕನ್ನಡ ಭಾಷೆಯು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ ಎಂದು ಪಿರಿಯಾಪಟ್ಟಣ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಹೆಚ್.ಎನ್. ಸುಧಾಕರ್ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ ಹಲವಾರು ಮಹನೀಯರ ಪರಿಶ್ರಮದಿಂದ ಇಂದು ಕರ್ನಾಟಕ ಜಗತ್ತಿನಾದ್ಯಂತ ಹೆಸರು ಪಡೆದಿದೆ ಕನ್ನಡ ಎಂಬುದು ಕೇವಲ ಹೆಸರಲ್ಲ ನಮ್ಮ ಅಸ್ತಿತ್ವ ಕನ್ನಡ ಭಾಷೆ ಕೇವಲ ಅಕ್ಷರ ಅಲ್ಲ ಅದು ನಮ್ಮ ಜೀವ, ನಮ್ಮ ಸಂಸ್ಕೃತಿಯಾಗಿದೆ ನಮ್ಮ ಕನ್ನಡ ಭಾಷೆ ಅದ್ವಿತೀಯ, ಅಮೋಘ ಹಾಗೂ ಅಭೂತಪೂರ್ವವಾದುದು. ಇಂತಹ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಆಗ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ
ನಮ್ಮ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ – ಸಂಸ್ಕಾರಗಳ ರಕ್ಷಣೆ ಮತ್ತು ಪೋಷಣೆಗೆ ನಾವು ಕಂಕಣ ಬದ್ಧರಾಗಿ ನಿಲ್ಲಬೇಕು ಆಗ ಮಾತ್ರ ನಾವು ಭಾರತಾಂಬೆಯ ತನುಜಾತೆಯ ಮಕ್ಕಳಾಗಲು ಅರ್ಹರಾಗುತ್ತೇವೆ ನಮ್ಮ ಹೆತ್ತ ತಾಯಿ, ಹೊತ್ತ ಭೂಮಿ, ತಾಯಿಭಾಷೆ, ಭಾಷೆ ಕಲಿಸಿದ ಗುರು, ಇವರುಗಳ ಮಹತ್ವ ತಿಳಿಯದೆ ನಾವು ಎಷ್ಟೇ ಉನ್ನತ ಶಿಕ್ಷಣ ಹಾಗೂ ಪದವಿಗಳನ್ನು ಪಡೆದರು ಸಹ ಜೀವನ ವ್ಯರ್ಥವಾಗುತ್ತದೆ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ ಕನ್ನಡ ಅಭಿಮಾನವನ್ನು ಮೂಡಿಸುವಲ್ಲಿ ರಾಜ್ಯೋತ್ಸವದಂತ ಸಮಾರಂಭಗಳು ಹೆಚ್ಚು ಪೂರಕವಾಗಿವೆ ಕನ್ನಡ ನಾಡಿಗಾಗಿ ಸೇವೆ ಮಾಡಿದ ಕವಿಗಳು, ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕು ಒಂದು ನೆಲದಲ್ಲಿ ನೂರಾರು ಸಂಸ್ಕೃತಿಯನ್ನು ತುಂಬಿಕೊಂಡಿರುವ ರಾಜ್ಯ ಕರ್ನಾಟಕ ಕನ್ನಡವನ್ನೇ ಬಳಸಿ ಕನ್ನಡವನ್ನೇ ಉಳಿಸಿ ಎನ್ನುವ ಮನೋಭಾವ ಪ್ರತಿಯೊಬ್ಬ ಕನ್ನಡಿಗರಲ್ಲೂ ಮೂಡಬೇಕು ರಾಜ್ಯೋತ್ಸವದ ಹಬ್ಬವು ಒಂದು ದಿವಸಕ್ಕೆ ಸೀಮಿತ ಗೊಳಿಸದೆ ವರ್ಷಪೂರ್ತಿ ಆಚರಿಸುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಪ್ರಕಾಶ್, ಪ್ರಾಂಶುಪಾಲರಾದ ಪ್ರವೀಣ್, ಕಿರಣ್, ಮುಖ್ಯ ಶಿಕ್ಷಕಿ ದಿವ್ಯ ಉಪನ್ಯಾಸಕರಾದ ಸ್ವಾಮಿಗೌಡ, ಮಂಜುನಾಥ್, ಪ್ರೀತು, ಪಲ್ಲವಿ, ಸೌಮ್ಯ ಶ್ರೀ, ಸೇರಿದಂತೆ ಇತರರು ಇದ್ದರು
