ಸಗಣಿಯಲ್ಲಿ ಹೊರಳಾಟ, ಹೊಡೆದಾಟ: ಇದು ತಮಿಳುನಾಡು ಕನ್ನಡಿಗರ ವಿಶಿಷ್ಟ ಆಚರಣೆ.

Bangarappa c journalist
Bangarappa c journalist - Journalist
3 Min Read
  • ಸಗಣಿಯಲ್ಲಿ ಹೊರಳಾಟ, ಹೊಡೆದಾಟ: ಇದು ತಮಿಳುನಾಡು ಕನ್ನಡಿಗರ ವಿಶಿಷ್ಟ ಆಚರಣೆ.


ಈ ಸಗಣಿಯಾಟವನ್ನು ನೋಡಲು ಸುತ್ತಮುತ್ತಲ ಜಿಲ್ಲೆಯ ಜನ ಕೂಡ ಆಗಮಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಜನರ ಕಿರುಚಾಟ, ಘೋಷಣೆಗಳು ಸಗಣಿ ಎರಚಾಡುವವರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಗೊರೆ ಹಬ್ಬದ ಸಂಭ್ರಮದಲ್ಲಿ ಗುಮಟಾಪುರದ ಜನ
ಚಾಮರಾಜನಗರ: ಜಿಲ್ಲೆಯ ಗಡಿಯಂಚಿನಲ್ಲಿರುವ ತಾಳವಾಡಿ ತಾಲೂಕಿನ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯಿತು. ಸಗಣಿ ರಾಶಿ ಹಾಕಿ ಅದರಲ್ಲಿ ಗ್ರಾಮಸ್ಥರು ಉರುಳಾಡಿ, ಹೊಡೆದಾಡಿ ಖುಷಿ ಪಡುವುದೇ ಈ ಹಬ್ಬದ ವಿಶೇಷ. ಪ್ರತಿವರ್ಷ ಬಲಿಪಾಡ್ಯಮಿ ಮಾರನೇ ದಿನ ಈ ಆಚರಣೆ ನಡೆಯಲಿದ್ದು, ನೂರಾರು ವರ್ಷಗಳಿಂದ ಈ ಹಬ್ಬ ನಡೆದುಕೊಂಡು ಬಂದಿದೆ.

ಅಂದಹಾಗೆ, ಇವರು ತಮಿಳುನಾಡಿನ ಕನ್ನಡಿಗರು. ಮಾತೃಭಾಷೆ ಕನ್ನಡವೇ ಆದರೂ ತಮಿಳುನಾಡಿಗೆ ಸೇರಿರುವ ಈ ಗ್ರಾಮಸ್ಥರು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಪ್ರದಾಯದಂತೆ ಗೊರೆ ಹಬ್ಬದಲ್ಲಿ ಮಿಂದೆದ್ದರು. ಸಗಣಿ ಮಧ್ಯೆಯೇ ಹೊರಳಾಡಿ, ಒಬ್ಬರಿಗೊಬ್ಬರು ಎರಚಾಡಿ, ಹೊಡೆದಾಡಿದರು. ಕನ್ನಡಿಗರ ಈ ವಿಶಿಷ್ಟ ಆಚರಣೆಗೆ ಬುಧವಾರ ಸಹಸ್ರಾರು ಮಂದಿ ಸಾಕ್ಷಿಯಾದರು.

ಗೊರೆ ಹಬ್ಬದ ಸಂಭ್ರಮದಲ್ಲಿ ಗುಮಟಾಪುರದ ಜನ
ಉತ್ಸಾಹದಿಂದ ಪಾಲ್ಗೊಳ್ಳುವ ಗ್ರಾಮದ ಜನ: ಗ್ರಾಮದ ಬೀರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿ ರಾಶಿ ರಾಶಿ ಸಗಣಿಯನ್ನು ದೇವಾಲಯ ಮುಂದೆ ಪೇರಿಸುತ್ತಾರೆ. ಪ್ರತಿ ಮನೆ ಮನೆಗೂ ಹೋಗಿ ಸಂಗ್ರಹಿಸಿದ್ದ ಹಾಲು ತುಪ್ಪದಲ್ಲಿ ಊರ ಮುಂಭಾಗದಲ್ಲಿರುವ ಕಾರೇಶ್ವರನಿಗೆ ಅಭಿಷೇಕ ನಡೆಸುತ್ತಾರೆ. ಚಾಡಿಕೋರ ಎಂಬಾತನನ್ನು ಕತ್ತೆ ಮೇಲೆ ಕುಳ್ಳಿರಿಸಿ ಆತನಿಗೆ ಹಂಬಿನ ಸೊಪ್ಪು, ಹುಲ್ಲಿನ ಮೀಸೆ, ನಾಮ ಹಾಕಿ ಮೆರವಣಿಗೆಯಲ್ಲಿ ಕರೆತಂದು ಬೀರಪ್ಪನ ದೇವಾಲಯದ ಸುತ್ತಾ ಪ್ರದಕ್ಷಿಣೆ ಹಾಕುತ್ತಾರೆ. ಆ ಬಳಿಕ ಸಗಣಿ ಎರಚಾಟ ಆರಂಭಗೊಂಡು ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಇದು ಪ್ರತಿ ವರ್ಷ ನಡೆಸಿಕೊಂಡು ಬರುರುತ್ತಿರುವ ಸಂಪ್ರದಾಯವಾಗಿದೆ.

ಗೊರೆ ಹಬ್ಬದ ಸಂಭ್ರಮದಲ್ಲಿ ಗುಮಟಾಪುರದ ಜನ
ಇಲ್ಲಿನ ಗ್ರಾಮ ದೇವರ ಇಷ್ಟಾರ್ಥವಾಗಿ ಈ ಗೊರೆ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆಗೆ ನೂರಾರು ವರ್ಷಗಳ ಇತಿಹಾಸ ಕೂಡ ಇದೆ. ಸ್ಥಳೀಯರು ಹೇಳುವ ಪ್ರಕಾರ ಗ್ರಾಮದ ಕಾಳೇಗೌಡ ಎಂಬುವರ ಮನೆಗೆ ಉತ್ತರ ಪ್ರದೇಶದಿಂದ ದೇವರ ಗುಡ್ಡ(ಸ್ವಾಮೀಜಿ)ನೊಬ್ಬ ಬಂದಿದ್ದ. ಅವನು ಸತ್ತ ಮೇಲೆ ಅವನ ಜೋಳಿಗೆ, ಬೆತ್ತ, ಎಲ್ಲವನ್ನು ತಿಪ್ಪೆ ಗುಂಡಿಗೆ ಬಿಸಾಕಿದರಂತೆ. ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿ ಬಳಿಗೆ ಎತ್ತಿನ ಗಾಡಿಯೊಂದು ಹೋದಾಗ ಲಿಂಗವೊಂದು ಕಾಣಿಸಿಕೊಂಡಿತು. ಗಾಡಿಯ ಚಕ್ರ ಲಿಂಗದ ಮೇಲೆ ಹರಿದಾಗ ಅದರಿಂದ ರಕ್ತ ಬಂದಿತಂತೆ. ಆಗ ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ ಕಾಣಿಸಿಕೊಂಡು ದೀಪಾವಳಿ ಹಬ್ಬವಾದ ಮರುದಿನವೇ ಗೊರೆ ಹಬ್ಬ ಮಾಡುವಂತೆ ಹೇಳಿತು ಎಂಬ ಪ್ರತೀತಿ ಇದೆ. ಈ ಲಿಂಗ ಕಾಣಿಸಿಕೊಂಡ ತಿಪ್ಪೆಗುಂಡಿಯಲ್ಲೇ ಈಗಿನ ಬೀರಪ್ಪನ ದೇವಸ್ಥಾನ ಕಟ್ಟಿ ಗೊರೆ ಹಬ್ಬವನ್ನು ಆಚರಿಸಲಾಗುತ್ತಿದೆ.

ಗೊರೆ ಹಬ್ಬದ ಸಂಭ್ರಮದಲ್ಲಿ ಗುಮಟಾಪುರದ ಜನ
ಸಂಭ್ರಮ ಹೀಗಿತ್ತು: ಹಬ್ಬ ಆರಂಭಕ್ಕೂ ಮುನ್ನ ಕೆರೆಯಂಗಳದಲ್ಲಿ ಕತ್ತೆಯನ್ನು ತೊಳೆದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಗಣಿ ಎರಚಾಡುವ ಬೀರಪ್ಪನ ಗುಡಿವರಗೆ ಕರೆ ತರುತ್ತಾರೆ. ನಂತರ ಕತ್ತೆಯನ್ನು ತೊಳೆಯಲಾಗಿದ್ದ ಕೆರೆಯಲ್ಲಿಯೇ ಎಲ್ಲರು ಸ್ನಾನ ಮಾಡಿಕೊಂಡು ಊರಿಗೆ ಬರುವಾಗ ಚಾಡಿಕೋರನನ್ನು ಹಿಯಾಳಿಸುತ್ತಾ, ಊರ ಗೌಡನನ್ನು ಅಶ್ಲೀಲ ಶಬ್ದಗಳಿಂದ ಬೈಯುತ್ತಾ ಸಂಭ್ರಮಿಸುತ್ತಾರೆ. ತಮ್ಮ ಗ್ರಾಮಕ್ಕೆ ಚಾಡಿಕೋರರು ಇರಬಾರದೆಂಬ ಉದ್ದೇಶವೂ ಈ ಆಚರಣೆ ಹಿಂದೆ ಅಡಗಿದೆ. ಹಿಂದೆ ಸುಳ್ಳು ಹೇಳುವ ವ್ಯಕ್ತಿ ಗ್ರಾಮದ ಜನರಲ್ಲಿ ದ್ವೇಷಾಸೂಯೆ ಮೂಡಿಸಿ ಅಶಾಂತಿಗೆ ಕಾರಣವಾಗಿದ್ದ ಎಂಬ ಮಾತಿದೆ. ಅಂತಹ ವ್ಯಕ್ತಿಗಳಿಗೆ ಯಾವ ರೀತಿ ಶಿಕ್ಷೆ ನೀಡಲಾಗುತ್ತಿತ್ತು ಎಂಬುದರ ಸಂಕೇತವಾಗಿ ಇಬ್ಬರಿಗೆ ಚಾಡಿಕೋರರ ವೇಷ ಧರಿಸಿ ಕತ್ತೆಯ ಮೇಲೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಸಗಣಿ ರಾಶಿ ಬಳಿ ಗ್ರಾಮದ ಜನ ಜಮಾಯಿಸುತ್ತಾರೆ.

ಸಗಣಿ ರಾಶಿಯಲ್ಲೇ ಸಂಭ್ರಮಿಸುವ ಜನ: ಚಾಡಿಕೋರನನ್ನು ಪ್ರದಕ್ಷಿಣೆ ಹಾಕಿಸಿದ ಬಳಿಕ ಆರಂಭಗೊಳ್ಳುವ ಸಗಣಿ ಎರೆಚಾಟ ಸುಮಾರು ಎರಡು ಗಂಟೆ ನಡೆಯುತ್ತದೆ. ಮಕ್ಕಳು, ಯುವಕರು ಹಾಗೂ ಹಿರಿಯರು ಕೂಡ ಭಾಗವಹಿಸುತ್ತಾರೆ. ಅಂದಹಾಗೆ, ಊರಿನವರು ಮಾತ್ರ ಈ ಸಗಣಿ ಎರೆಚಾಟದಲ್ಲಿ ತೊಡಗುತ್ತಾರೆ. ದೊಡ್ಡ ದೊಡ್ಡ ಸಗಣಿ ಮುದ್ದೆಗಳನ್ನು ಮಾಡಿ ಒಬ್ಬರ ಮೇಲೆ ಒಬ್ಬರು ಎತ್ತಿ ಹಾಕಿ ಖುಷಿಪಡುತ್ತಾರೆ. ಸಗಣಿ ರಾಶಿಯಲ್ಲೇ ಉರುಳಾಡಿ, ಹೊಡೆದಾಡಿ ಸಂಭ್ರಮಿಸುತ್ತಾರೆ. ಈ ಸಗಣಿಯಾಟವನ್ನು ನೋಡಲು ಸುತ್ತಮುತ್ತಲ ಜಿಲ್ಲೆಯ ಜನರೂ ಜಮಾಯಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಜನರ ಕಿರುಚಾಟ, ಘೋಷಣೆಗಳು ಸಗಣಿ ಎರಚಾಡುವವರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಯುಗಾದಿಯ ನಂತರ ಈ ಗ್ರಾಮದಲ್ಲಿ ನಡೆಯುತ್ತೆ ಸಗಣಿ ಬೆರಣಿ ಸಮರ!: ಇದರ ಹಿಂದಿದೆ ಐತಿಹಾಸಿಕ ಹಿನ್ನೆಲೆ

Share This Article