ಪವಿತ್ರ ರಾಷ್ಟ್ರೀಯ ವಿದ್ಯಾಲಯದಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ
ರಾಮನಗರ :
ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ ಅದು ನಮ್ಮ ಭಾವನೆ, ಪರಂಪರೆ, ಸಂಸ್ಕೃತಿ, ಅಸ್ಮಿತೆಯ ಪ್ರತೀಕವಾಗಿದೆ ಎಂದು ಡಾ.ಅಂಕನಹಳ್ಳಿ ಪಾರ್ಥ ಹೇಳಿದರು.
ಪವಿತ್ರ ರಾಷ್ಠ್ರೀಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚಾರಣೆ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿ ಕುರಿತ ಮಾತನಾಡಿದ ಅವರು, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ನಮ್ಮ ನಾಡು ಕಲೆ ಸಾಹಿತ್ಯ, ಸಂಗೀತ, ನೃತ್ಯ ಶಿಲ್ಪಕಲೆ ಜನಪದ ಕಲೆ ಶ್ರೀಮಂತವಾಗಿದ್ದು, ನೆಲ ಮೂಲ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದೆ ಎಂದರು.
ಕರ್ನಾಟದಲ್ಲಿ ಕಳೆದ ಐದು ವರ್ಷಗಳಲ್ಲಿ 3620 ಶಾಲೆಗಳು ಮುಚ್ಚಲಾಗಿದೆ. ಇನ್ನು ಮುಂದಾದರೂ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತರಾದ ರೂಪೇಶ್ ಕುಮಾರ್ ಮಾತನಾಡಿ, ಮಕ್ಕಳು ಯೋಗ ಧ್ಯಾನ ಮಾಡುವ ಮೂಲಕ ನೆನಪಿನ ಶಕ್ತಿಯನ್ನು ವೃದ್ದಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಬದುಕಿನಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳಬೇಕು. ಪೋಷಕರ ನಿರೀಕ್ಷೆ, ರಾಷ್ಟ್ರದ ಸಂಪತ್ತು ಆಗಿರುವ ಮಕ್ಕಳು ದೇಶದ ಕೀರ್ತಿಯನ್ನು ಹೆಚ್ಚಿಸುವಂತಾಗಲಿ ಎಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆ ವಹೀಸಿದ್ದ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಮಾತನಾಡಿ, ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಗುಣ ನಡತೆ ರೂಢಿಸಿಕೊಂಡು ಸುಸಂಸ್ಕೃತರಾಗಿ ತಂದೆ ತಾಯಿಗಳಿಗೆ ನಾಡಿಗೆ ಮಕ್ಕಳು ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕರಾದ ಅಣ್ಣಯ್ಯಪ್ಪ, ಹಿರಿಯ ಶಿಕ್ಷಕ ಪುಟ್ಟಲಿಂಗಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿ ಚಂದನ ಕಾರ್ಯಕ್ರಮ ನಿರೂಪಿಸಿದರು.
