ಕೋಳಿ ಸಾಕಾಣಿಕೆ ವೆಚ್ಚ ಹೆಚ್ಚಳಕ್ಕೆ ಒತ್ತಾಯಿಸಿ ನ.25ರಂದು ವಿಧಾನಸೌಧ ಚಲೋ.

ಹುಣಸೂರು:
ಕೋಳಿ ಸಾಕಾಣಿಕೆ ವೆಚ್ಚವನ್ನು ಪ್ರತಿ ಕೆ.ಜಿ.ಗೆ ಕನಿಷ್ಠ 10 ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿ ನವೆಂಬರ್ 25ರಂದು ಕೋಳಿ ಸಾಕಾಣಿಕೆದಾರರು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದಾರೆ. ಅಂದು ಸಂಜೆಯಿಂದಲೇ ಕೋಳಿ ಮರಿಗಳ ಸ್ವೀಕಾರ ಹಾಗೂ ಸಾಕಿರುವ ಕೋಳಿಗಳ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೋಳಿ ಸಾಕಾಣಿಕೆಗಾರರ ರೈತ ಸಂಘದ ಜಿಲ್ಲಾ ಅದ್ಯಕ್ಷ ಗೌರಿಪುರ ಸ್ವಾಮಿನಾಯಕ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ತಿಂಗಳಿಂದ ಕೋಳಿ ಸಾಕಾಣಿಕೆದಾರರಿಗೆ ನ್ಯಾಯಯುತ ದರ ನೀಡುವಂತೆ ಸಚಿವರು, ಶಾಸಕರು ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದರು.
ನಿರ್ವಹಣಾ ವೆಚ್ಚ ಗಣನೀಯ ಏರಿಕೆ 2020ರಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಪ್ರತಿ ಕೆ.ಜಿ. ಕೋಳಿ ಸಾಕಾಣಿಕೆಗೆ 6.20 ರೂ. ದರ ನಿಗದಿಪಡಿಸಲಾಗಿತ್ತು. ಕಳೆದ ಐದು ವರ್ಷಗಳಿಂದ ರೈತರಿಗೆ ಸಿಗುತ್ತಿರುವ ದರದಲ್ಲಿ ಯಾವುದೇ ಗಮನಾರ್ಹ ಏರಿಕೆಯಾಗಿಲ್ಲ. ಆದರೆ ಪಶು ಆಹಾರ, ಮೇವು, ಕಾರ್ಮಿಕರ ಕೂಲಿ ಸೇರಿದಂತೆ ಸಾಕಾಣಿಕೆಯ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಪ್ರಸ್ತುತ ಕಂಪನಿಗಳು ಪ್ರತಿ ಕೆ.ಜಿ.ಗೆ ಕೇವಲ 6.20 ರೂ. ನೀಡುತ್ತಿದ್ದು, 15 ಸಾವಿರ ಕೋಳಿಗಳನ್ನು ಸಾಕಿದರೂ ರೈತರಿಗೆ ನಿರೀಕ್ಷಿತ ಆದಾಯ ದೊರೆಯುತ್ತಿಲ್ಲ. ಕಾರ್ಮಿಕರ ಕೂಲಿ ಪಾವತಿಸಲೂ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನಿಷ್ಟ ತಾತ್ಕಾಲಿಕವಾಗಿ ಪ್ರತಿ ಕೆ.ಜಿ.ಗೆ 10 ರೂ. ನೀಡುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ಕಂಪನಿಗಳು ಅದನ್ನು ಜಾರಿಗೊಳಿಸುತ್ತಿಲ್ಲ. ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ವಿಜಯ್ ಅವರನ್ನು ನಾಲ್ಕೈದು ಬಾರಿ ನಮ್ಮ ಸಂಘದ ಪ್ರದಾನ ಕಾರ್ಯದರ್ಶಿ ಶ್ರೀಧರ್ ರೆಡ್ಡಿ ಹಾಗೂ ನಿರ್ದೇಶಕರು
ಭೇಟಿ ಮಾಡಿ ಸಮಸ್ಯೆ ವಿವರಿಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ರೈತರ ಕನಿಷ್ಠ ಬೇಡಿಕೆ ಪ್ರತಿ ಕೆ.ಜಿ.ಗೆ 10 ರೂ. ಆಗಿದ್ದು, ದೀರ್ಘಕಾಲೀನವಾಗಿ 20 ರೂ. ದರ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.
ರೈತರಿಗೆ ಹೋರಾಟಕ್ಕೆ ಕರೆ ನವೆಂಬರ್ 25ರಿಂದ ಯಾವುದೇ ರೈತರು ಕೋಳಿ ಮರಿಗಳನ್ನು ಸ್ವೀಕರಿಸಬಾರದು ಹಾಗೂ ಸಾಕಿರುವ ಕೋಳಿಗಳನ್ನು ಕಂಪನಿಗಳಿಗೆ ಹಸ್ತಾಂತರಿಸಬಾರದು. ಕೋಳಿ ಸಾಕಾಣಿಕೆಯನ್ನೇ ನಂಬಿಕೊಂಡಿರುವ ನೂರಾರು ಕುಟುಂಬಗಳ ಬದುಕು ಮತ್ತು ಭವಿಷ್ಯಕ್ಕಾಗಿ ಈ ಹೋರಾಟ ನಡೆಯುತ್ತಿದ್ದು, ರಾಜ್ಯದ ಎಲ್ಲಾ ಕೋಳಿ ಸಾಕಾಣಿಕೆದಾರರು ಒಗ್ಗಟ್ಟಿನಿಂದ ಹೋರಾಟದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲಾ ಸಂಚಾಲಕ ಚಂದನ್, ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕ ಲೋಕೇಶ್, ಹಾಜರಿದ್ದರು..
ಪೋಟೋ
1) ಜಿಲ್ಲಾ ಕೋಳಿ ಬೆಳೆಗಾರರ ಅದ್ಯಕ್ಷ ಗೌರಿಪುರ ಸ್ವಾಮಿನಾಯಕ್,
