ಸರ್ಕಾರಿ ಶಾಲೆಗೆ ಕರವೇ ಸ್ವಾಭಿಮಾನಿ ಸೇನೆ ಕಾಯಕಲ್ಪ
ರಾಜ್ಯೋತ್ಸವ ಪ್ರಯುಕ್ತ ಸರ್ಕಾರಿ ಶಾಲೆಗೆ ಬಣ್ಣ, ಅಗತ್ಯ ಸಾಧನ ವಿತರಣೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯು ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸಿತು.
ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಸರ್ಕಾರಿ ಶಾಲೆಯು ಶಿಥಿಲಾವಸ್ಥೆ ತಲುಪಿದ್ದನ್ನು ಗಮನಿಸಿ ರಾಜ್ಯಾಧ್ಯಕ್ಷ ನಿಂಗರಾಜೇಗೌಡ ನೇತೃತ್ವದಲ್ಲಿ ಶಾಲೆಗೆ ಹೊಸ ರೂಪ ನೀಡಲಾಗಿದೆ.
ಸರ್ಕಾರಿ ಶಾಲೆಯ 5 ಕೊಠಡಿಗಳಿಗೆ ಬಣ್ಣ ಹಚ್ಚಿ, ಲ್ಯಾಪ್‌ಟಾಪ್ ಕೊಡುಗೆ ಕೊಡುವ ಜೊತೆಗೆ ಮಕ್ಕಳಿಗೆ ತಟ್ಟೆ-ಲೋಟ, ಓದುವ ಸಾಮಗ್ರಿ ವಿತರಿಸಲಾಯಿತು. ಈ ವೇಳೆ
ನಿಂಗರಾಜೇಗೌಡ ಮಾತನಾಡಿ, ವಿಜಯಪುರ ಜಿಲ್ಲೆಯಿಂದ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡುವ ಕಾರ್ಯ ಆರಂಭಗೊಂಡಿದ್ದು ಮಕ್ಕಳಿಗೆ ಕಲಿಕಾ ಸಾಮಗ್ರಿ, ಬಿಸಿಯೂಟ ಸವಿಯಲು ತಟ್ಟೆ ಲೋಟ ವಿತರಿಸಲಾಗಿದೆ. ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು, ಕನ್ನಡಪರ ಹೋರಾಟಗಾರರು ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದೇವೆ, ಇನ್ನಾದರೂ ಗ್ರಾಮೀಣ ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಕೊಡಲಿ ಎಂದು ಒತ್ತಾಯಿಸಿದರು.
ಕರವೇ ಸ್ವಾಭಿಮಾನಿ ಸೇನೆಯ ಎಂ.ಪಿ.ಸುರೇಶ್, ಅನುರಾಧ ಇನ್ನಿತರರು ಹಾಜರಿದ್ದರು.
