ಶಯನಾವಸ್ಥೆಯಲ್ಲಿದ್ದ ಬಡಾವಣೆಗಳ ಮರು ಅಭಿವೃದ್ಧಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ

ರಾಮನಗರ :
ಶಯನಾವಸ್ಥೆಯಲ್ಲಿದ್ದ ಮೂರು ಬಡಾವಣೆಗಳನ್ನು ಮರು ಅಭಿವೃದ್ಧಿ ಮಾಡವ ಮೂಲಕ ಪ್ರಾಧಿಕಾರದ ಮೇಲೆ ನಂಬಿಕೆ ಇರಿಸಿ ನಿವೇಶನ ಖರೀದಿಸಿದ್ದ 1661 ಜನರ ಕನಸುಗಳಿಗೆ ಇಂದು ಕಾಯಕಲ್ಪ ನೀಡಲಾಗಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.
ನಗರದ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿನ ಜೀಗೇನಹಳ್ಳಿ ಬಡಾವಣೆಯಲ್ಲಿ ನಡೆದ ಬಡಾವಣೆಗಳ ಮರು ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಪ್ರತಿನಿಧಿ ಆದವನಿಗೆ ಜನಗಳ ಬದುಕಿನ ಬಗ್ಗೆ ಕಾಳಜಿ ಇರಬೇಕು. ಅಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಇಡಿ ಕ್ಚೇತ್ರದಲ್ಲಿ ಕುಡಿಯುವ ನೀರಿನಿಂದ ಹಿಡಿದು ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಗೆ ಗಮನ ನೀಡಲಾಗಿದೆ. ಹತ್ತಾರು ವರ್ಷಗಳಿಂದ ಕಾಯುತ್ತಿದ್ದ ನೂರಾರು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲಾಗಿದೆ ಎಂದರು.
ಪ್ರಾಧಿಕಾರದ ನಿಕಟಪೂರ್ವ ಆಯುಕ್ತ ಶಿವನಂಕಾರಿಗೌಡ ಮಾತನಾಡಿ, 2014 ರಲ್ಲಿ 1837 ನಿವೇಶನಗಳಲ್ಲಿ 1661 ನಿವೇಶನಗಳನ್ನು ಹರಾಜು ಮೂಲಕ ಅಂಚಿಕೆ ಮಾಡಲಾಯಿತು. ಆದರೆ ನಮ್ಮ ಬಡಾವಣೆಯ ನಕ್ಷೆಗೆ ಅನುಮೋದನೆ ಸೇರಿದಂತೆ ಯಾವುದೆ ದಾಖಲಾತಿಗಳು ಪ್ರಾಧಿಕಾರದಲ್ಲಿ ಇರಲಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಉತ್ತರ ಕೊಡುವುದು ಕಷ್ಟವಾಗಿತ್ತು. ಕೊನೆಗೆ ಸಚಿವ ಸಂಪುಟದಲ್ಲಿ ಅನುಮತಿ ಪಡೆದು ನಿವೇಶನ ಅಭಿವೃದ್ಧಿಗೆ ನಿವೇಶನದಾರರಿಂದ ಒಂದೆ ಬಾರಿಗೆ ಮರು ಅಭಿವೃದ್ಧಿಗೆ ಹಣ ಪಾವತಿ ಮಾಡಿಸಿಕೊಂಡು ಇದೀಗ ಬಡಾವಣೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.
ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರ ಸಹಕಾರದಿಂದ ಪ್ರಾಧಿಕಾರ ವ್ಯಾಪ್ತಿಯ ಮೂರು ಬಡಾವಣೆಗಳನ್ನು ಮರು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ರಾಜು, ಚನ್ನಪಟ್ಟಣ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮಾತನಾಡಿದರು. ಜಿಬಿಡಿಎ ಅಧ್ಯಕ್ಷ ನಟರಾಜ್, ಡಿಸಿಸಿ ಅಧ್ಯಕ್ಷ ಸಿ.ಎನ್.ಆರ್.ವೆಂಕಟೇಶ್, ಪ್ರಾಧಿಕಾರದ ಆಯುಕ್ತರಾದ ತೇಜಸ್ವಿನಿ, ತಾಪಂ ಇಓ ಪೂರ್ಣಿಮಾ, ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್, ಪ್ರಾಧಿಕಾರದ ನಿರ್ದೇಶಕರಾದ ಫರ್ವೀಜ್ ಪಾಷಾ, ಶ್ರೀನಿವಾಸ್, ಶ್ರೀದೇವಿ, ಬೆಂಗಳೂರು ಡೇರಿ ನಿರ್ದೇಶಕ ಹರೀಶ್, ನಗರಸಭೆ ಮಾಜಿ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಪ್ರಮುಖರಾದ ಜಿ.ಮಹೇಂದ್ರ, ವಿಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾಗಿದ್ದಾಗ ಬಡಾವಣೆಗಳ ಅಭಿವೃದ್ಧಿಗೆ ಶ್ರಮವಹಿಸಿದ್ದ ಆಯುಕ್ತ ಶಿವನಂಕಾರಿಗೌಡ ಅವರನ್ನು ಸಾರ್ವಜನಿಕರು ಹಾಗೂ ಪ್ರಾಧಿಕಾರದ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.
