ಕಾವೇರಿ ಪ್ರಾಧಿಕಾರದ ಹಕ್ಕು ಮೊಟಕಿಗಾಗಿ
ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೆಗೌಡ.
ನವದೆಹಲಿ (ಬೆಂಗಳೂರು) : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ನೀಡಲಾಗಿರುವ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪತ್ರ ಬರೆಯವ ಮುಖೇನ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ
ತಮ್ಮರಾಜಕೀಯದ ಜೀವನದ ಉದ್ದಕ್ಕೂ ನಾಡಿನ ಹೀತಕ್ಕಾಗಿ ನೀರಿನ ಹೋರಾಟ ಮಾಡಿ ರೈತರ ಪರ ನಿಂತ ಇವರು ದೇಶದ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು , ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ತಲೆದೋರಿರುವ ಕುಡಿಯುವ ನೀರು ಮತ್ತು ಕೃಷಿ ಬಿಕ್ಕಟ್ಟಿನ ಕುರಿತು ಕೇಂದ್ರ ಸರ್ಕಾರವು ಶೀಘ್ರವಾಗಿ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಬೇಕೆಂದು ಅವರು ಕೋರಿದ್ದಾರೆ.
‘ರಾಜ್ಯದಲ್ಲಿ ಈ ವರ್ಷ ಶೇ 60ರಷ್ಟು ಮಾತ್ರ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ಜಲಾಶಯಗಳು ಶೇ 50ರಿಂದ 55ರಷ್ಟು ಮಾತ್ರ ತುಂಬಿವೆ. ಇಂತಹ ಭೀಕರ ಪರಿಸ್ಥಿತಿಯಲ್ಲಿಯೂ, ಮುಂಬರುವ ಬೇಸಿಗೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾಯ್ದಿರಿಸಬೇಕಾದ ಅಲ್ಪ ನೀರನ್ನೂ ತಮಿಳುನಾಡಿನ ಕೃಷಿ ಅಗತ್ಯಗಳಿಗಾಗಿ ಬಿಡುವಂತೆ ಸಿಡಬ್ಲ್ಯುಎಂಎ ಪದೇಪದೇ ನಿರ್ದೇಶನ ನೀಡುತ್ತಿರುವುದು ಆತಂಕಕಾರಿ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕಕ್ಕೆ ಹಂಚಿಕೆಯಾದ ನೀರನ್ನು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಬಳಸುವ ಸ್ವಾತಂತ್ರ್ಯವಿದೆ. ಅದಕ್ಕೆ ಹಂಚಿಕೆಯಾದ ನೀರಿನ ಪ್ರಮಾಣ ಕಡಿಮೆಯಾಗದ ಹೊರತು ಬೇರೆ ಯಾವುದೇ ರಾಜ್ಯಕ್ಕೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ’ ಎಂಬ 2025ರ ನವೆಂಬರ್ 13ರ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿಡಬ್ಲ್ಯುಎಂಎ ತನ್ನ ಅಧಿಕಾರವನ್ನು ಕೇವಲ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲು ಅಳತೆ ಕೇಂದ್ರದಲ್ಲಿ ನೀರಿನ ಹರಿವಿನ ಮೇಲ್ವಿಚಾರಣೆಗೆ ಮಾತ್ರ ಸೀಮಿತಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಪರಿಶೀಲನೆ: ‘ಕಾವೇರಿ ನ್ಯಾಯಮಂಡಳಿಯು 50 ವರ್ಷಗಳಿಗಿಂತ ಹಳೆಯ ದತ್ತಾಂಶಗಳ ಆಧಾರದ ಮೇಲೆ ನೀರು ಹಂಚಿಕೆ ಮಾಡಿದೆ. ಪ್ರಸ್ತುತ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಮುಂಗಾರು ಚಕ್ರ ಸಂಪೂರ್ಣವಾಗಿ ಅನಿಶ್ಚಿತವಾಗಿದೆ. ಹೀಗಾಗಿ, ಬದಲಾಗಿರುವ ಪ್ರಸ್ತುತ ಪರಿಸ್ಥಿತಿಗಳಿಗೆ ಅನುಗುಣವಾಗಿ ನ್ಯಾಯಮಂಡಳಿಯ ತೀರ್ಪು ಹಾಗೂ ಸುಪ್ರೀಂ ಕೋರ್ಟ್ನ 2018ರ ಆದೇಶಗಳನ್ನು ಸಮಗ್ರವಾಗಿ ಮರುಪರಿಶೀಲಿಸುವ ಕಾಲ ಬಂದಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಮೇಕೆದಾಟು: ಶೀಘ್ರ ಅನುಮೋದನೆ ಕೊಡಿಸಿ’
‘ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ‘ಮೇಕೆದಾಟು ಕುಡಿಯುವ ನೀರು ಸರಬರಾಜು ಯೋಜನೆ’ ಅತ್ಯಂತ ಅಗತ್ಯವಾಗಿದೆ. ಈ ಸಂಬಂಧ ಕೇಂದ್ರ ಜಲ ಆಯೋಗಕ್ಕೆ ಪರಿಷ್ಕೃತ ವಿವರವಾದ ಯೋಜನಾ ವರದಿ ಸಲ್ಲಿಸಲಾಗಿದ್ದು ಆದ್ಯತೆಯಲ್ಲಿ ಅನುಮೋದನೆ ನೀಡಬೇಕು’ ಎಂದು ಪ್ರಧಾನಿ ಅವರನ್ನು ದೇವೇಗೌಡರು ಕೋರಿದ್ದಾರೆ. ‘ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಯೋಜಿಸುತ್ತಿರುವ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ (ಒಟ್ಟು 147.7 ಟಿಎಂಸಿ ಅಡಿ) ಕರ್ನಾಟಕಕ್ಕೆ ಕೇವಲ 15.9 ಟಿಎಂಸಿ ಅಡಿ ನೀರು ತಾತ್ಕಾಲಿಕವಾಗಿ ಹಂಚಿಕೆಯಾಗಿದೆ. ಈ ಪ್ರಮಾಣವು ಇತರ ರಾಜ್ಯಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದ್ದು ಸಮಾನತೆ ಮತ್ತು ನೈಸರ್ಗಿಕ ನ್ಯಾಯದ ಆಧಾರದ ಮೇಲೆ ಕರ್ನಾಟಕದ ಹಂಚಿಕೆಯನ್ನು ಹೆಚ್ಚಿಸಬೇಕು’ ಎಂದೂ ಮನವಿ ಮಾಡಿದ್ದಾರೆ ಎನ್ನಲಾಗಿದೆ.
