ಮಾದಪ್ಪನ ಬೆಟ್ಟದ ರಸ್ತೆಯಲ್ಲಿ ಅಕ್ರಮ ಟೋಲ್ ವಸೂಲಿ ನಿಲ್ಲಿಸಿ, ಅರಣ್ಯ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಿ : ರೈತ ಮುಖಂಡ ಗೌಡೆಗೌಡ ಆಗ್ರಹ.
ಹನೂರು:ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿನ ಅಂತರ್ ರಾಜ್ಯದ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಕೆಲವರು ಅಕ್ರಮವಾಗಿ ಶುಲ್ಕ ವಸೂಲಾತಿಯನ್ನು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಜೊತೆಗೆ ಕಾಡಂಚಿನಲ್ಲಿರುವ ಅರಣ್ಯ ವಾಸಿಗಳ ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಹಾಗೂ ಹಕ್ಕುಪತ್ರಗಳನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹನೂರು ತಾಲ್ಲೂಕು ಘಟಕವು ತೀವ್ರವಾಗಿ ಆಗ್ರಹಿಸಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಪಾಲಾರ್ – ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು. ಅಲ್ಲದೆ, ಬೆಟ್ಟದ ಅಂತರ್ ರಾಜ್ಯ ಪಿಡಬ್ಲ್ಯುಡಿ ರಸ್ತೆ (ರಾಜ್ಯ ಹೆದ್ದಾರಿ 79) ಪ್ರಾಧಿಕಾರದ ವಶದಲ್ಲಿದೆಯೇ ಅಥವಾ ಪಿಡಬ್ಲ್ಯುಡಿ ವಶದಲ್ಲಿದೆಯೇ ಎಂಬ ಸ್ಪಷ್ಟ ವಿವರವನ್ನು ಹೆದ್ದಾರಿಯಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ರೈತರು ಮತ್ತು ಸಾರ್ವಜನಿಕರು ಅನ್ನದಾಸೋಹಕ್ಕಾಗಿ ಪ್ರತಿದಿನ ನೀಡುತ್ತಿರುವ ತರಕಾರಿಗಳು, ಹಣ್ಣು-ಹಂಪಲುಗಳು ಹಾಗೂ ದವಸ ಧಾನ್ಯಗಳ ಲೆಕ್ಕವನ್ನು ಬಹಿರಂಗಪಡಿಸಬೇಕು. ಹಾಗೆಯೇ ಭಕ್ತರು ಹರಕೆ ರೂಪದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ನೀಡುತ್ತಿರುವ ದನ-ಕರುಗಳ ಸಂರಕ್ಷಣೆ ಕುರಿತಾದ ವಿವರಗಳನ್ನೂ ನೀಡಬೇಕು.
ಮಲೆ ಮಹದೇಶ್ವರ ದೇವಸ್ಥಾನವನ್ನು ನಿರ್ಮಿಸಿದ ಆಲಂಬಾಡಿ ಜುಂಜೇಗೌಡರ ಮೂಲ ಗ್ರಾಮವಾದ ಆಲಂಬಾಡಿಗೆ ಇದುವರೆಗೆ ಸರ್ಕಾರದಿಂದ ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆಯಂತಹ ಕನಿಷ್ಠ ಮೂಲ ಸೌಲಭ್ಯಗಳೂ ದೊರೆತಿಲ್ಲ.
ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರಂಪರಿಕ ಅರಣ್ಯ ವಾಸಿಗಳ ಗ್ರಾಮಗಳಾದ ಆಲಂಬಾಡಿ, ಅಪ್ಪುಕಾಣಪಟ್ಟಿ, ಜಂಬೂಪಟ್ಟಿ, ಮಾರಿಕೋಟೆ, ಪುದುಕಾಡು, ತೆಂಗಾಯಿಕೊಂಬು, ಪುಂಗಂ ಹಾಗೂ ಆತ್ತೂರು ಗ್ರಾಮಗಳಿಗೆ ಕೂಡಲೇ ಕುಡಿಯುವ ನೀರು, ವಿದ್ಯುತ್, ರಸ್ತೆ ಹಾಗೂ ಹಕ್ಕುಪತ್ರಗಳನ್ನು ಒದಗಿಸಬೇಕು.
ಹೊಗೇನಕಲ್ ಜಲಪಾತ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ತಮಿಳುನಾಡಿನ ಮಾದರಿಯಲ್ಲಿ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಬೇಕು. ಸ್ಥಳೀಯ ನಿವಾಸಿಗಳಿಗೆ ಉದ್ಯೋಗಾವಕಾಶ ಸಿಗುವಂತೆ ಇದನ್ನು ಸುಸಜ್ಜಿತ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.
ಇದೇ ಚಳುವಳಿಯ ಸಮಯದಲ್ಲಿ ಸರಗೂರು ನಟರಾಜು ಜಿಲ್ಲಾಧ್ಯಕ್ಷರು ಮೈಸೂರು, ಸಿದ್ದಪ್ಪ ಅಧ್ಯಕ್ಷರು ನಂಜನಗೂಡು, ಗೌಡೆ ಗೌಡ ಜಿಲ್ಲಾಧ್ಯಕ್ಷರು ಚಾಮರಾಜನಗರ, ಹಾಗೆ ಹಲವಾರು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸೇರಿದಂತೆ ರೈತ ಮುಖಂಡರು ಹಾಜರಿದ್ದರು.
