ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಮೊಟ್ಟಮೊದಲ ಬಾರಿಗೆ ನಡೆದ ಎರಡು ದಿನಗಳ ಕಂಬಳ ಓಟಕ್ಕೆ ತೆರಬಿದ್ದಿದ್ದು, ಕರಾವಳಿ ಕಂಬಳಗಳ ಅಕ್ರಮಣಕಾರಿ ಓಟ ಕಂಡು ಮೈಸೂರು ಜನರು ಮನಸೋತರು.
ಮೈಸೂರು ರಿಂಗ್ ರಸ್ತೆಯ ಸಾತಗಳ್ಳಿ ಬಳಿಯ ವಿಶಾಲ ಮೈದಾನದಲ್ಲಿ ರವಿವಾರ ಮತ್ತು ಸೋಮವಾರ ಎರಡು ದಿನಗಳಿಂದ ನಡೆದ ಕಂಬಳ ಕೋಣಗಳ ಆರ್ಭಟ ಕಂಡು ಸಾರ್ವಜನಿಕರು ಖಷಿಪಟ್ಟರು. ಕೋಣಗಳ ಬಳಿ ನಿಂತು ಕೆಲವರು ಸೆಲ್ಫಿ ಕೂಡ ತೆಗೆದುಕೊಂಡರು. ಕಂಬಳ ಕೋಣಗಳ ಗಾತ್ರ, ಅದನ್ನು ಓಡಿಸುವವರ ಚಾಕಚಕ್ಯತೆ ದೇಹದಾರ್ಡ್ಯ, ಕೋಣಗಳ ಓಟ ಕಂಡು ಆಶ್ಚರ್ಯಗೊಂಡರು. ಕೆಸರು ನೀರಿನಲ್ಲಿನ ಕೋಣಗಳ ಓಟ ನೋಡುಗರನ್ನು ರೋಮಾಂಚನಗೊಳಿಸಿತು
.
ಕಂಬಳ ನೋಡಲು ಮೈಸೂರು ಮಾತ್ರವಲ್ಲದೆ,ಬೆಂಗಳೂರು, ಹಾಸನ, ಮಡಿಕೇರಿ, ತಮಿಳುನಾಡು ಮತ್ತು ಕೇರಳ ದಿಂದಲೂ ಸಾಕಷ್ಡು ಜನರು ಆಗಮಿಸಿ ಕೋಣಗಳ ಓಟವನ್ನು ಕಣ್ತುಂಬಿಕೊಂಡರು. ಒಂದು ಜೊತೆ ಕೋಣಗಳ ಬೆಲೆ 15 ಲಕ್ಷಕ್ಕಿಂತಲೂ ಹೆಚ್ವು ಎಂಬುದನ್ನು ಕೇಳಿ ಆಶ್ಚರ್ಯಪಟ್ಟರು. ಕೋಣಗಳ ಬೆಲೆ ಜೊತೆಗೆ ಕೋಣ ಓಡಿಸುವವರಿಗೆ ತಿಂಗಳಿಗೆ 8 ರಿಂದ 10 ಲಕ್ಷ ಸಂಬಳ ಕೊಡಬೇಕು ಮತ್ತು ಅದನ್ನು ಸಾಕುವವರ ಸಂಬಳ, ಕೋಣಗಳಿಗೆ ಶುದ್ಧ ಕುಡಿಯುವ ನೀರನ್ನ ನೀಡಬೇಕು ಮತ್ತು ಗೋಡಂಬಿ, ದ್ರಾಕ್ಷಿ ಸೇರಿದಂತೆ ಡ್ರೈ ಫ್ರೋಟ್ಸ್ ನೀಡ ಬೇಕು ಎನ್ನುವುದನ್ನು ಆಶ್ಚರ್ಯವನ್ನುಂಟು ಮಾಡಿತು. ಕರಾವಳಿ ಕ್ರೀಡೆ ಮೈಸಸೂರಿಗೆ ಆಗಮಿಸಿದ್ದು ನಿಜವಾಗಲೂ ಸಂತೋಷವಾಗಿದೆ.ಕೋಣಗಳ ಓಟ ಕಂಡು ನಮಗೆ ರೋಮಾಂಚನವಾಯಿತು ಎಂದು ಮೈಸೂರಿನ ಮಹಿಳೆಯೊಬ್ಬರು ತಿಳಿಸಿದರು.
ಕೋಣಗಳ ಓಟವನ್ನು ಟಿವಿ, ಸಿನಿಮಾ ಗಳಲ್ಲಿ ನೋಡುತ್ತಿದ್ದೆವು.ಈಗ ಕಣ್ಣೆದುರಿನಲ್ಲೇ ನೋಡಿದ್ದು ಖುಷಿಯಾಯಿತು. ಅವುಗಳ ಓಟ ನೋಡಿದರೆ ಭಯವಾಗಲಿದೆ. ಅದನ್ನು ಎಷ್ಟು ಧೈರ್ಯದಿಂದ ಓಡಿಸುತ್ತಾರೆ ಎಂದು ಮತ್ತೊಬ್ಬ ಮಹಿಳೆ ತಿಳಿಸಿದರು. ಆಶ್ವರ್ಯ ಎಂಬ ಮಹಿಳೆ ಮಾತನಾಡಿ, ಕೋಣಗಳ ಓಟ ನೋಡಲು ಸರಿಯಾಗಿ ವ್ಯವಸ್ಥೆ ಮಾಡಿರಲಿಲ್ಲ,ಮಧ್ಯ, ಮಧ್ಯ ಕಂಬಳಗಳನ್ನು ಹಾಕಿ ವೀಕ್ಷಣೆಗೆ ಅಡಚಣೆಯುಂಟು ಮಾಡಿದರು. ಮುಕ್ತವಾಗಿ ನೋಡಲು ಅವಕಾಶ ಕಲ್ಪಿಸಬೇಕಿತ್ತು ಎಂದು ಹೇಳಿದರು. ಒಟ್ಟಾರೆ ವಿರೋಧದ ನಡುವೆ ಕಂಬಳಕ್ರೀಡೆ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆಯಿತು. ಮುಂದಿನವರ್ಷವೂ ಕಂಬಳ ಕ್ರೀಡೆ ಮೈಸೂರಿನಲ್ಲೇ ನಡೆಯಬೇಕು. ಈ ಮೂಲಕ ನಾಡಿನ ಎಲ್ಲಾ ಭಾಗಗಳಿಗೂ ಕಂಬಳ ಕೊಂಡೊಯ್ಯಬೇಕು ಎಂದು ಸಾರ್ವಜನಿಕರು ಹೇಳಿದರು.
