ಕನ್ನಡದ ಮನಸ್ಸುಗಳಿಂದ ಕನ್ನಡವನ್ನು ಕಟ್ಟುವ ಕೆಲಸವಾಗಬೇಕು ಸಾಹಿತಿ ತ್ರಿಪುರಾಂತಕ.

Bangarappa c journalist
Bangarappa c journalist - Journalist
1 Min Read

ಕನ್ನಡದ ಮನಸ್ಸುಗಳಿಂದ ಕನ್ನಡವನ್ನು ಕಟ್ಟುವ ಕೆಲಸವಾಗಬೇಕು ಸಾಹಿತಿ ತ್ರಿಪುರಾಂತಕ.

ಕೊಳ್ಳೇಗಾಲ, ನ.೧೩:
ಕನ್ನಡದ ಮನಸ್ಸುಗಳಿಂದ ಕನ್ನಡವನ್ನು ಕಟ್ಟುವ ಕೆಲಸವಾಗಬೇಕು ಎಂದು ಸಾಹಿತಿ ತ್ರಿಪುರಾಂತಕ ತಿಳಿಸಿದರು.
ಇಂದು ಪಟ್ಟಣದ ಜೆಎಸ್ಎಸ್ ಬಾಲಕಿಯರ ಪಪೂ ಕಾಲೇಜಿನಲ್ಲಿ ಜೆಎಸ್’ಬಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಮಾಸಾಚರಣೆ ೨೦೨೬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿರಿ-ಸಂಪತ್ತು ಸಂವೃದ್ದವಾಗಿರುವ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ತನ್ನದೇ ಆದ ಪರಂಪರೆ, ಇತಿಹಾಸವಿದ್ದು, ನಾಡಿನ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು. ಪ್ರಾದೇಶಿಕ ಭಾಷೆಗಳ ಮೇಲೆ ಜಾಗತೀಕರಣದ ಪ್ರಭಾವ ಬೀರುತ್ತಿದ್ದು, ಕನ್ನಡಿಗರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ನಾಡು-ನುಡಿಯ ಬೆಳವಣಿಗೆಗೆ ಸಾಮಾನ್ಯ ಜನರು ಕೈ ಜೋಡಿಸಬೇಕು. ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗೆ ಎಲ್ಲಾ ವರ್ಗದವರು ಶ್ರಮಿಸಬೇಕು. ಮಕ್ಕಳು ಶಾಲಾ ಹಂತದಲ್ಲೇ ನಾಡು-ನುಡಿ-ನೆಲ-ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯವನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಡಿ ಭಾಗವಾಗಿದ್ದರೂ ಕನ್ನಡವನ್ನು ಬೆಳೆಸಿ ಶ್ರೀಮಂತಗೊಳಿಸುವ ಜನರು ಚಾಮರಾಜನಗರ ಜಿಲ್ಲೆಯಲ್ಲಿದ್ದಾರೆ. ನಾವೆಲ್ಲರೂ ಸಹಜವಾಗಿ, ಸರಳವಾಗಿ ಬದುಕಿ, ನಮ್ಮ ಆಚಾರ ವಿಚಾರಗಳನ್ನು ಗೌರವಿಸಿ, ಆಹಾರ ಪದ್ಧತಿಯನ್ನು ಉಳಿಸಿಕೊಂಡು ನಾಡಿನ ಕೀರ್ತಿಯನ್ನು ಬೆಳೆಸಬೇಕಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಅನೇಕರ ದೂರದೃಷ್ಟಿಯ ಫಲವಾಗಿ, ಕನ್ನಡ ನಾಡು ಉದಯವಾಯಿತು, ನಾಡು, ನುಡಿ, ಸಂಸ್ಕೃತಿಯ ರಕ್ಷಣೆಗೆ ಎಲ್ಲೇ ಇದ್ದರೂ ನಾವೆಲ್ಲಾ ಶ್ರಮಿಸಬೇಕು ಎಂದರು.
ಜೆಎಸ್’ಬಿ ಪ್ರತಿಷ್ಠಾನದ ಶಶಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಜಿಲ್ಲಾದ್ಯಂತ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪ್ರತಿಯೊಬ್ಬರಲ್ಲೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸುವ ಕಾರ್ಯವನ್ನು ಪ್ರತಿಷ್ಠಾನವು ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ನಿರಂತರವಾಗಿ ನಾಡು-ನುಡಿಯ ಸೇವೆ ಮುಂದುವರೆಯಲಿದೆ ಎಂದು ತಿಳಿಸಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕಗಳ ಬಹುಮಾನ ನೀಡಲಾಯಿತು ಹಾಗೂ ಕನ್ನಡ ಓದನ್ನು ಉತ್ತೇಜಿಸಲು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡ ಕಿರುಪುಸ್ತಕ ನೀಡಲಾಯಿತು. ಪ್ರಾಂಶುಪಾಲರಾದ ಎನ್ ಮಹದೇವಸ್ವಾಮಿ ಸೇರಿದಂತೆ ಕಾಲೇಜಿನ ಎಲ್ಲಾ ಅಧ್ಯಾಪಕರು, ಸಿಬ್ಬಂದಿಗಳು, ವಿಧ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.

Share This Article