ಆನೆ ದಾಳಿಗೆ ಮತ್ತೊಂದು ಬಲಿ: ತೋಟಕ್ಕೆ ತೆರಳುತ್ತಿದ್ದ ರೈತನನ್ನು ತುಳಿದು ಕೊಂದ ಒಂಟಿ ಆನೆ.

Bangarappa c journalist
Bangarappa c journalist - Journalist
2 Min Read

ಆನೆ ದಾಳಿಗೆ ಮತ್ತೊಂದು ಬಲಿ: ತೋಟಕ್ಕೆ ತೆರಳುತ್ತಿದ್ದ ರೈತನನ್ನು ತುಳಿದು ಕೊಂದ ಒಂಟಿ ಆನೆ.

*ಬೇಲೂರು ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮೃತರ ಕುಟುಂಬಸ್ಥರು, ಗ್ರಾಮಸ್ಥರ ಪ್ರತಿಭಟನೆ – ನಿರಂತರ ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹ.

ಬೇಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ್ತೊಂದು ಅಮಾಯಕ ಜೀವ ಕಾಡಾನೆ ದಾಳಿಗೆ ಬಲಿಯಾಗಿದೆ. ಅರೇಹಳ್ಳಿ ಹೋಬಳಿಯ ನಾಗೇನಹಳ್ಳಿ ಹಿರೇ ಅಸಡ್ಡೆ ಗ್ರಾಮದ ತೋಟದ ಮಾಲೀಕ ರೆಹಮಾನ್ (ಬಾಬು), ಸುಮಾರು 45 ವರ್ಷ, ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ತಮ್ಮ ತೋಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಒಂಟಿ ಕಾಡಾನೆಯೊಂದು ದಾಳಿ ನಡೆಸಿ ತುಳಿದು ಕೊಂದಿದೆ.

ಬೆಳಗಿನ ಜಾವ ತೋಟದ ಕೆಲಸಕ್ಕೆ ತೆರಳುತ್ತಿದ್ದ ರೆಹಮಾನ್ ಅವರಿಗೆ ಎದುರಾದ ಒಂಟಿ ಆನೆ ಏಕಾಏಕಿ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತದೇಹವನ್ನು ಬೇಲೂರು ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದ್ದು, ಆಸ್ಪತ್ರೆಯ ಮುಂಭಾಗದಲ್ಲಿ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಪದೇಪದೇ ಕಾಡಾನೆ ದಾಳಿಯಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಳಂಬವಾಗುತ್ತಿದೆ. ಇನ್ನೆಷ್ಟು ಜನರ ಪ್ರಾಣ ಹೋದರೆ ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತದೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಕಾಡಾನೆಗಳ ನಿರಂತರ ದಾಳಿಯನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು. ಜನವಸತಿ ಪ್ರದೇಶ ಹಾಗೂ ರೈತರ ತೋಟಗಳಿಗೆ ಕಾಡಾನೆಗಳು ನುಗ್ಗದಂತೆ ಪರಿಣಾಮಕಾರಿ ಯೋಜನೆ ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾಡಾನೆಗಳ ಹಾವಳಿಯಿಂದ ರೈತರು ಜೀವಭಯದಲ್ಲೇ ಕೃಷಿ ಚಟುವಟಿಕೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ದುರಂತಗಳು ಮರುಕಳಿಸದಂತೆ ಸರ್ಕಾರ ತಕ್ಷಣವೇ ಗಂಭೀರ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.,

ಸ್ಥಳಕ್ಕೆ ಎಸ್ ಪಿ ಭೇಟಿ, ಬಗ್ಗದ ಪ್ರತಿಭಟನಕಾರರು,,
ಆನೆ ತುಳಿತಕ್ಕೆ ಒಳಗಾದ ವ್ಯಕ್ತಿ ಶವ ಕೊಡಬೇಕಂದು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕ ಎಸ್ ಪಿ ಶುಭನ್ವಿತ ಭೇಟಿ ನೀಡಿ ಸಾಂತ್ವನ ಹೇಳಿದರೂ ಜಗ್ಗದ ಪ್ರತಿಭಟನಕಾರರು, ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಅರಣ್ಯ ಸಚಿವರು ಬರಬೇಕಂದು ಹಠ ಹಿಡಿದರು, ಶವ ಕೊಡಿ ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡಿ ನಮ್ಮ ಸಂಪ್ರದಾಯದಂತೆ ಅಂತ್ಯ ಕ್ರಿಯೆ ಮಾಡುತ್ತೇವೆ ಪೊಲೀಸ್ ಅವಕಾಶ ಕೊಡುತ್ತಿಲ್ಲ, ನಮ್ಮ ಮೇಲೆ ಡಬ್ಬಾಳಿಕೆ ಮಾಡುತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು,
ಘಟನೆ ನಡೆದು ಎರಡು ಗಂಟೆಯಗಿದೆ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದರೆ ಫೋನ್ ತೆಗೆಯುತ್ತಿಲ್ಲ, ಇಂತಹ ಬೇಜವಾಬ್ದಾರಿ ಅಧಿಕಾರಿಗಳು ಇದ್ದಾರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರ ಕಾರ್ಯದರ್ಶಿ ಭೇಟಿ ನೀಡಲಿದ್ದಾರೆ ಜಿಲ್ಲಾಧಿಕಾರಿಗಳು ಇಷ್ಟು ಅಸಡ್ಡೆ ತೋರಬಾರದು ಸಮಸ್ಯೆ ಬಗೆ ಹರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಬೇಸರವಾಗಿದೆ
ಶಿವರಾಮ್, ಮಾಜಿ ಸಚಿವ,

Share This Article