ಅಧಿಕ ಎಥೆನಾಲ್‌ ಬಳಕೆ, ಕೇಂದ್ರಕ್ಕೆ ವರದಿ: ರಿಜ್ವಾನ್‌ ಹರ್ಷದ್‌

Bangarappa c journalist
Bangarappa c journalist - Journalist
2 Min Read

ಅಧಿಕ ಎಥೆನಾಲ್‌ ಬಳಕೆ, ಕೇಂದ್ರಕ್ಕೆ ವರದಿ: ರಿಜ್ವಾನ್‌ ಹರ್ಷದ್‌
​ಮೈಸೂರು: ಅಧಿಕ ಎಥೆನಾಲ್ ಮಿಶ್ರಣದಿಂದ ವಾಹನ ಸವಾರರು ಹಾಗೂ ಜನಸಾಮಾನ್ಯರಿಗೆ ಮಾತ್ರವಲ್ಲದೆ, ಪೆಟ್ರೋಲ್ ಬಂಕ್‌ಗಳಿಗೂ ಸಮಸ್ಯೆಯಾಗುತ್ತಿದ್ದು, ಜನರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇಂದು ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದು ಆಹಾರ ನಾಗರೀಕ ಸರಬರಾಜು ಇಲಾಖೆ ಸಚಿವ ರಿಜ್ವಾನ್‌ ಹರ್ಷದ್‌ ತಿಳಿಸಿದರು.
ಟರ್ಮಿನಲ್‌ಗಳಲ್ಲಿ ಎಥೆನಾಲ್‌ ಬಳಕೆ ಕುರಿತು ಮೈಸೂರಿನಲ್ಲಿ ಪ್ರತಿಕ್ರಯಿಸಿದ ಅವರು, ರಾಜ್ಯದ 6 ಪೆಟ್ರೋಲಿಯಂ ಟರ್ಮಿನಲ್‌ಗಳಲ್ಲಿ ಪೆಟ್ರೋಲ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣವಾಗುತ್ತಿದೆ. ಇದರಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ತಪ್ಪಿಲ್ಲ. ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣ ಮಾಡಲು ಸಾಧ್ಯವಿಲ್ಲ. ಟರ್ಮಿನಲ್‌ಗಳಿಂದಲೇ ಈ ಸಮಸ್ಯೆ ಉಂಟಾಗುತ್ತಿದೆ. ರಾಜ್ಯದ ಪೆಟ್ರೋಲಿಯಂ ಟರ್ಮಿನಲ್‌ಗಳಲ್ಲಿ ಪೆಟ್ರೋಲ್‌ಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಈ ಕುರಿತು ತಾಂತ್ರಿಕ ಹಾಗೂ ಪ್ರಯೋಗಾಲಯದ ವರದಿಗಳನ್ನೊಳಗೊಂಡ ಅಧಿಕೃತ ವರದಿಯನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತಾಂತ್ರಿಕ ಮತ್ತು ಪ್ರಯೋಗಾಲಯದ ವರದಿಗಳನ್ನು ಆಧರಿಸಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ, ರಾಜ್ಯ ಸರ್ಕಾರವೇ ತನ್ನ ವ್ಯಾಪ್ತಿಯಲ್ಲಿ ಕಠಿಣ ಕ್ರಮ ಜರುಗಿಸಲಿದೆ. ​ಈ ವಿಚಾರವನ್ನು ಹಾಲು ಅಥವಾ ಬಸ್ ದರ ಏರಿಕೆಗೆ ತಳಕು ಹಾಕುವುದು ಸರಿಯಲ್ಲ. ದರ ಏರಿಕೆಗೂ ಒಂದು ತಿಂಗಳ ಮುಂಚೆಯೇ ಈ ಕುರಿತು ಎಲ್ಲಾ ವರದಿಗಳನ್ನು ತರಿಸಿಕೊಳ್ಳಲಾಗಿತ್ತು. ವರದಿಯ ಸತ್ಯಾಸತ್ಯತೆ ತಿಳಿದ ನಂತರವೇ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬಾಕ್ಸ್‌
ರಾಜ್ಯಾದ್ಯಂತ ಎಪಿಎಂಸಿ ಮೇಲೆ ದಾಳಿ
ಮೈಸೂರು: ಆಹಾರ ನಾಗರೀಕರ ಸರಬರಾಜು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಎಪಿಎಂಸಿಗಳ ಮೇಲೂ ಇಲಾಖಾಧಿಕಾರಿಗಳು ದಾಳಿ ನಡೆಸಿದರು. ಅಂತೆಯೇ ಮೈಸೂರು ನಗರದ ಬಂಡಿಪಾಳ್ಯದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಸಚಿವ ರಿಜ್ವಾನ್ ಅರ್ಷದ್ ಭೇಟಿ ನೀಡಿ, ಮಳಿಗೆಗಳಲ್ಲಿನ ತೂಕ ಮತ್ತು ಅಳತೆ ಯಂತ್ರಗಳನ್ನು ಖುದ್ದು ಪರಿಶೀಲಿಸಿದರು.
​ಮಾರುಕಟ್ಟೆಯ ಪ್ರತಿಯೊಂದು ಮಳಿಗೆಗೂ ತೆರಳಿದ ಸಚಿವರು, ವ್ಯಾಪಾರಿಗಳು ಬಳಸುತ್ತಿರುವ ತೂಕದ ಯಂತ್ರಗಳ ನಿಖರತೆಯನ್ನು ಪರೀಕ್ಷಿಸಿದರು. ರೈತರು ಮತ್ತು ಗ್ರಾಹಕರಿಗೆ ತೂಕದಲ್ಲಿ ಯಾವುದೇ ರೀತಿಯ ಮೋಸವಾಗದಂತೆ ಎಚ್ಚರಿಕೆ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಮೈಸೂರಿನಲ್ಲಿ ಒಂದೇ ದಿನದಲ್ಲಿ 180ಮಳಿಗೆಗಳನ್ನು ಪರಿಶೀಲಿಸಿದ ಅಧಿಕಾರಿಗಳ ತಂಡ 60 ಪ್ರಕರಣಗಳನ್ನು ದಾಖಲಿಸಿ 2,41,000 ರೂ. ದಂಡ ವಿಧಿಸಿತು. ಇದರಲ್ಲಿ ಅವೈಜ್ಞಾನಿಕ ತೂಕದ ಯಂತ್ರಗಳು, ಕಡಿಮೆ ಪ್ರಮಾಣದ ಸರಕು ಪೂರೈಕೆ, ಅಕ್ಕಿಯ ಪ್ಯಾಕೇಟ್‌ ಮೇಲೆ ನಮೂದಿಸಿದ ನಿವ್ವಳ ತೂಕದಲ್ಲಿ ದೋಷ, ಪ್ಯಾಕ್‌ ಮಾಡಿದ ಸರಕುಗಳಿಗೆ ಸಂಬಂಧಿಸಿದ ಘೋಷಣಾ ನಿಯಮಗಳನ್ನು ಪಾಲಿಸದಿರುವುದು ಇವೆ ಮೊದಲಾದ ನಿಯಮಗಳಡಿಯಲ್ಲಿ ದಂಡ ವಿಧಿಸಲಾಯಿತು.

Share This Article