ಚಿಕ್ಕಮಗಳೂರಿನ ಜ್ಯೂನಿಯರ್ ಕಾಲೇಜಿನಲ್ಲಿ ನಡೆದ ಜಾನಪದ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು.
ಚಿಕ್ಕಮಗಳೂರು: ಜಾನಪದ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಜಾನಪದ ಪರಿಷತ್ ಮತ್ತು ನಮ್ಮ ನಿಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಜಿಲ್ಲಾ ಜಾನಪದ ಪರಿಷತ್ತು, ನಗರದ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ನಡಿಗೆ ಕನ್ನಡ ನಾಡು, ನುಡಿ ಮತ್ತು ಜಾನಪದದ ಕಡೆಗೆ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು ಶ್ರೀಮಂತ ಜಾನಪದ ಸಂಪತ್ತನ್ನು ಹೊಂದಿದೆ. ಈಗಲೂ ಅನೇಕ ಜಾನಪದ ಸಾಹಿತ್ಯ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದೆ. ಜಾನಪದಕ್ಕೆ ಲಿಪಿ ಇಲ್ಲ. ಕೂಲಿ, ನಾಟಿ, ರಾಗಿ ಬೀಸುವಾಗ ಬಾಯಿಂದ ಬಾಯಿಗೆ ಬಂದ ಕಲೆ ಜಾನಪದ ಎಂದರು. ಶೋಷಿತ ವರ್ಗದವರೇ ಕುಣಿಯುವ ಡೊಳ್ಳು ಕುಣಿತ ಶಕ್ತಿಶಾಲಿ ಕಲೆ, ಕಂಸಾಳೆ ಮಂಡ್ಯದಲ್ಲಿ ಪ್ರಸಿದ್ದ ಪಡೆದರೆ, ವೀರಗಾಸೆ ವೀರಶೈವ ಸಂಪ್ರದಾಯದಲ್ಲಿ ಮಾಡುವ ನೃತ್ಯ, ಯಕ್ಷಗಾನ ಕರಾವಳಿಯಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಸೋಮನ ಕುಣಿ, ಪಟ ಕುಣಿತ, ಪೂಜಾಕುಣಿತ, ಉಮತ್ತಾಟ್, ಗಾರುಡಿಗೊಂಬೆ ಇವೆಲ್ಲಾ ನಮ್ಮ ನಾಡಿನ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂದು ಹೇಳಿದರು.
ಖ್ಯಾತ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಚೆಲ್ಲಿದರೂ ಮಲ್ಲಿಗೆಯಾ.., ಬೆಳಗಾಗ ನಾನೆದ್ದು ಯರ್ಯಾರ ನನೆಯಲಿ… ಮತ್ತಿತರೆ ಜಾನಪದ ಹಾಡುಗಳನ್ನು ವಿದ್ಯಾರ್ಥಿಗಳೊಂದಿಗೆ ತಾವೂ ಹಾಡಿ ನೃತ್ಯದ ಮೂಲಕ ರಂಜಿಸಿದರು. ಮಾತಾಡುತ್ತಲೇ ಗೌಡ ಅವರೇಕಾಯಿ ಕೊಯ್ದ ಎನ್ನುವ ನಾಣ್ಣುಡಿಯಂತೆ ಹಾಡುತ್ತಲೇ ನಾನು ಜಾನಪದದಲ್ಲಿ ಪಿಎಚ್ಡಿ ಪದವಿ ಪಡೆದೆ. ಕಾಲೇಜುಗಳಲ್ಲಿ ತಿಂಗಳಿಗೊಂದು ಇಂತಹ ಜಾನಪದ ಹಾಡುಗಾರಿಕೆ ಕಾರ್ಯಕ್ರಮ ಏರ್ಪಡಿಸಿದಲ್ಲಿ ಒಬ್ಬ ಅಪ್ಪಗೆರೆ ತಿಮ್ಮರಾಜು, ಒಬ್ಬ ಮಲ್ಲಿಗೆ ಸುಧೀರ್ ವಿದ್ಯಾರ್ಥಿಗಳ ಮಧ್ಯೆಹುಟ್ಟಿ ಬರಬಹುದು ಎಂದ ಅವರು ಜಾನಪದದ ಬಗ್ಗೆ ಅತೀವ ಆಸಕ್ತಿ ಇರುವ ಜಿ.ಬಿ.ಸುರೇಶ್ ಅವರನ್ನು ಈ ಬಾರಿಯ ಕಸಾಪ ಚುನಾವಣೆಯಲ್ಲಿ ಆರಿಸಿದ್ದೇ ಆದಲ್ಲಿ ಕನ್ನಡಕ್ಕೆ ಬಲ ತುಂಬಲಿದ್ದಾರೆ ಎಂದರು.
ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಪ್ರಾಸ್ತಾವಿಕ ಮಾತನಾಡಿ,ಜಿಲ್ಲೆಯ ಎಲ್ಲ ಪಿಯು ಮತ್ತು ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡಿಗೆ ನಾಡು, ನುಡಿ ಜಾನಪದದ ಕಡೆಗೆ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಲಾಗಿದೆ. ಜಾನಪದಕ್ಕೆ ಸಂಬದಿಸಿದಂತೆ ಈಗಾಗಲೇ ಜಿಲ್ಲೆಯಲ್ಲಿ 253 ಕಾರ್ಯಕ್ರಮಗಳನ್ನು ಮಾಡಿದ್ದು, ಯುವಪೀಳಿಗೆಗೆ ಜಾನಪದ ಸಾಹಿತ್ಯದ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಜ್ಯೂನಿಯರ್ ಕಾಲೇಜು ಪ್ರಾಂಶುಪಾಲ ವಿರೂಪಾಕ್ಷ ಸ್ವಾಗತಿಸಿ, ಉಪನ್ಯಾಸಕ ತ್ಯಾಗರಾಜ್ ನಿರೀಪಿಸಿದರು. ಗಿರಿಜಾಶಂಕರ್,
ಪತ್ರಕರ್ತ ಬಿ.ತಿಪ್ಪೇರುದ್ರಪ್ಪ, ಎಸ್ಡಿಎಂಸಿ ಉಪಾಧ್ಯಕ್ಷ ರಪೀಖ್ ಅಹ್ಮದ್,ಗಾಯಕ ಮಲ್ಲಿಗೆ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
