ದೇವಾಲಯದಲ್ಲಿ ಅವ್ಯವಹಾರ ಆರೋಪ ಶುದ್ಧಸುಳ್ಳು : ದೇವಾಲಯ ಸಮಿತಿ ಅಧ್ಯಕ್ಷ ನಿರಂಜನ್

ಸಮಿತಿ ಕಾರ್ಯದರ್ಶಿ ದೀಪಕ್ ಆರೋಪದಲ್ಲಿ ಹುರುಳಿಲ್ಲ
ರಾಮನಗರ:
ನಗರದ ಶ್ರೀ ಬನ್ನಿಮಹಾಕಾಳಿ ಅಮ್ಮನವರ ದೇವಾಲಯದ ಸೇವಾ ಸಮಿತಿಯ ಕಾರ್ಯದರ್ಶಿ ದೀಪಕ್ ಉಳಿದ ಪದಾಧಿಕಾರಿಗಳ ವಿರುದ್ಧ ನೀಡಿದ್ದ ಹೇಳಿಕೆಗಳೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ದೇವಾಲಯದ ಸಮಿತಿ ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ ಎಂದು ಸಮಿತಿಯ ಅಧ್ಯಕ್ಷ ನಿರಂಜನ್ ಸ್ಪಷ್ಟನೆ ನೀಡಿದರು.
ಮಂಡಿಪೇಟೆಯಲ್ಲಿರುವ ಶ್ರೀ ಬನ್ನಿಮಹಾಕಾಳಿ ಅಮ್ಮನವರ ದೇವಾಲಯದಲ್ಲಿ ಆಯೊಜನೆಯಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯದರ್ಶಿ ದೀಪಕ್ ಹೊರೆಸಿರುವ ಎಲ್ಲ ಆರೋಪಗಳು ಸುಳ್ಳು. ಅಡಮಾನ ಇಟ್ಟಿರುವ ಬೆಳ್ಳಿ ತಟ್ಟೆ, ನನ್ನ ಸ್ವಂತದ್ದು, ವಿಶೇಷ ಸಂದರ್ಭಗಳಲ್ಲಿ ನಮ್ಮ ಕುಟುಂಬ ಅದೇ ಬೆಳ್ಳಿ ತಟ್ಟೆಯನ್ನು ತಂಬಿಟ್ಟು ಆರತಿ ಬೆಳಗಳು ದೇವಾಲಯಕ್ಕೆ ತರುವುದು ವಾಡಿಕೆ. ಅದನ್ನು ನಾನು ನನ್ನ ವೈಯಕ್ತಿಕ ಕಾರಣಕ್ಕೆ ಅಡ ಇಟ್ಟಿದ್ದೇನೆ. ಆದರೆ ಆ ಬೆಳ್ಳಿ ತಟ್ಟೆ ದೇವಾಲಯಕ್ಕೆ ಸೇರಿದ್ದಲ್ಲ ಎಂದು ಸ್ಪಷ್ಟನೆ ನೀಡಿದರು.
ಕರಗ ಮಹೋತ್ಸವದ ವೇಳೆ ಭಕ್ತರಿಂದ 28 ಲಕ್ಷ ರೂ ಸಂಗ್ರಹವಾಗಿದೆ ಎಂದು ದೀಪಕ್ ಅವರು ಆರೋಪಿಸಿದ್ದಾರೆ. ಇದು ವಾಸ್ತವಕ್ಕೆ ದೂರವಾದದ್ದು. 28 ಲಕ್ಷ ಸಂಗ್ರಹವಾಗಬೇಕಾದರೆ ಎಷ್ಟು ಸಾವಿರ ಅಥವಾ ಲಕ್ಷ ಮಂದಿ ದೇವಾಲಯಕ್ಕೆ ಭೇಟಿ ಕೊಟ್ಟಿರಬೇಕು ಎಂಬ ಲೆಕ್ಕಾಚಾರ ಅವರಿಗೆ ಅರಿವಿಲ್ಲ ಎಂದರು.
ದೇವಾಲಯ ಜೀರ್ಣೋದ್ದಾರ ಕಾರ್ಯ ಪ್ರಗತಿಯಲ್ಲಿದೆ, ತಾವು ತಮ್ಮ ವೈಯಕ್ತಿಕ ಹಣವನ್ನು ಇಲ್ಲಿ ವೆಚ್ಚ ಮಾಡಿರುವುದಾಗಿ ದೀಪಕ್ ಅವರು ಹೇಳಿಕೆ ನೀಡಿದ್ದಾರೆ. ಆದರೆ ಈ ವಿಚಾರ ಸಮಿತಿಯ ಯಾರ ಗಮನದಲ್ಲೂ ಇಲ್ಲ, ಅವರೂ ಸಹ ಸಮಿತಿಯ ಸದಸ್ಯರಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿಲ್ಲ ಕಾರ್ಯದರ್ಶಿಯಾಗಿ ಅವರು ಸಮತಿಯ ಸಭೆಗಳನ್ನು ಆಯೋಜನೆ ಮಾಡಲಿಲ್ಲ ಎಂದರು.
ನಗರಸಭೆ ವತಿಯಿಂದ ದೇವಾಲಯ ಜೀರ್ಣೋದ್ದಾರಕ್ಕಾಗಿ 10ಲಕ್ಷ ರೂ ಅನುದಾನ ಬಿಡುಗಡೆಯಾಗಿತ್ತು. ನಗರಸಭೆವತಿಯಿಂದ ಹೊಸೂರು ಜಗದಿಶ್ ಎಂಬುವರಿಗೆ ಟೆಂಡರ್ ಆಗಿತ್ತು. ಎಲ್ಲ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ದೇವಾಲಯ ಸಮಿತಿಯನ್ನು ತಹಸೀಲ್ದಾರರು ರಚಿಸಿದ್ದಾರೆ. ಈ ಸಮತಿಯ ಅವಧಿ 2026ರ ನವೆಂಬರ್ನಲ್ಲಿ ಮುಕ್ತಾಯವಾಗುತ್ತದೆ. ಹೀಗಾಗಿ ಎಲ್ಲಾ ಲೆಕ್ಕಗಳನ್ನು ಸ್ಪುಟವಾಗಿ ಬರೆದು, ಆಡಿಟರ್ ಅವರಿಂದ ಪ್ರಮಾಣ ಪಡೆದುಕೊಂಡು ಅದನ್ನು ತಹಸೀಲ್ದಾರರಿಗೆ ಒಪ್ಪಿಸಿದ ನಂತರ ಅದರ ಮಾಹಿತಿಯನ್ನು ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುವುದಾಗಿ ಅಧ್ಯಕ್ಷ ನಿರಂಜನ್ ತಿಳಿಸಿದರು.
ಸಮಿತಿಯ ಸದಸ್ಯ ಉಪಾಧ್ಯಕ್ಷ ನಂಜುಂಡಪ್ಪ ಅವರು ಮಾತನಾಡಿ, ದೇವಾಲಯ ಪುನರ್ ನಿರ್ಮಾಣದ ವೇಳೆ ನನ್ನು ಉಸ್ತುವಾರಿಗೆ ಹಣವನ್ನು ನನಗೆ ಒಪ್ಪಿಸಲಾಗಿತ್ತು. ವೆಚ್ಚ ಆಗಿ 6.60 ಲಕ್ಷ ರೂ ನಾನು ಸಮಿತಿಗೆ ಪಾವತಿ ಮಾಡಬೇಕಾಗಿತ್ತು. 4.50 ಲಕ್ಷ ರೂ ಕೊಟ್ಟಿದ್ದೇನೆ. ಉಳಿದ 2.10 ಲಕ್ಷ ರೂಗಳು ತಾಂತ್ರಿಕ ಕಾರಣಕ್ಕೆ ವಿಳಂಬವಾಗಿ ಕೊಟ್ಟಿದ್ದೇನೆ. ಅಷ್ಟರಲ್ಲಾಗಲೇ ಕಾರ್ಯದರ್ಶಿ ದೀಪಕ್ ನನ್ನ ಬಳಿ ಚೆಕ್ ಪಡೆದುಕೊಂಡಿದ್ದರು. ಬಾಕಿ ಹಣವನ್ನು ನಾನು ತೀರಿಸಿದ್ದರು, ನನ್ನ ಚೆಕ್ ವಾಪಸ್ಸು ಆಗಲಿಲ್ಲ ಎಂದು ಕಾರ್ಯದರ್ಶಿ ದೀಪಕ್ ವಿರುದ್ಧ ಆರೋಪಿಸಿದರು.
ಸಮತಿಯ ಖಜಾಂಚಿ ನಾಗಮ್ಮ ಅವರು ಮಾತನಾಡಿ, ನಗರದ ಗಣೇಶ್ ಜ್ಯೂರೆಯರ್ಸ್ ಮಾಲೀಕ ಲಕ್ಷ್ಮಣ್ 1ಲಕ್ಷ ರೂ ಹಾಗೂ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ 50 ಸಾವಿರ ರೂ ದೇಣಿಗೆ ನೀಡಿದ್ದರು. ಈ ಎರಡೂ ಮೊತ್ತ ಕಾರ್ಯದರ್ಶಿ ದೀಪಕ್ ಅವರಿಗೆ ಕೊಟ್ಟಿದ್ದಾರೆ. ಆದರೆ ಆ ಹಣ ಇನ್ನು ಸಮಿತಿಯ ಲೆಕ್ಕಕ್ಕೆ ಜಮೆ ಆಗಿಲ್ಲ. ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದೇವಾಲಯದ ಅಭಿವೃದ್ಧಿಗಾಗಿ
ನಾವು ಯಾವುದೇ ಪ್ರವಾಸಕ್ಕಾಗಿ ತೆರಳಿಲ್ಲ. ದೇವಾಲಯದ ಅಭಿವೃದ್ಧಿಗಾಗಿ ಹೋಗಿದ್ದೇವು. ಧರ್ಮಸ್ಥಳ ಸಂಘದಿಂದ ಹಣ ಪಡೆದು ದೇವಾಲಯ ಜೀರ್ಣೋದ್ಧಾರ ಮಾಡಬೇಕಿತ್ತು. ಹಾಗಾಗಿ ಈ ಸಂಬಂಧ ಧರ್ಮಸ್ಥಳದ ಧರ್ಮಾಧಿಕಾರಿಗಳ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಲು ತೆರಳಿದ್ದೇವು. ಜೊತೆಗೆ, ಬನ್ನಿಮಹಾಂಕಾಳಿ ಅಮ್ಮನವರ ಮೂಲ ಕೊಲ್ಹಾಪುರ ಇರುವುದರಿಂದ ಪ್ರತಿ ವರ್ಷ ಅಲ್ಲಿಂದ ದೇವಾಲಯಕ್ಕೆ ಕರಗದ ಸಮಯದಲ್ಲಿ ಮಡಿಲಕ್ಕಿ ತರಲು ಮನವಿ ಸಲ್ಲಿಸಲು ತೆರಳಿದ್ದೇವು ಎಂದು ಸಮಿತಿ ಅಧ್ಯಕ್ಷ ನಿರಂಜನ್ ತಿಳಿಸಿದರು.
ಈ ವಿಚಾರವನ್ನು ತಾವು ತಹಸೀಲ್ದಾರರ ಗಮನಕ್ಕೂ ತರಲಾಗಿದೆ. ಕಾರ್ಯದರ್ಶಿ ದೀಪಕ್ ಹೊರೆಸಿರುವ ಎಲ್ಲಾ ಆರೋಪಗಳು ಸುಳ್ಳುಗಳೇ ಆಗಿವೆ. ದೀಪಕ್ ವಿರುದ್ಧ ದೂರು ನೀಡಿದ್ದು, ಈ ಹಿಂದೆಯು ಅವರ ವಿರುದ್ಧ ಸಾಕಷ್ಟು ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸಧ್ಯದಲ್ಲೇ ಆಡಿಟ್ ರಿಪೋರ್ಟ್ ಸಲ್ಲಿಕೆಯಾಗಲಿದೆ. ಇದನ್ನು ಸಾರ್ವಜನಿಕರ ಅವಗಹನೆಗೆ ಮುಕ್ತವಾಗಿ ಇರಿಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯ ರಾಜಶೇಖರ್, ದೇವಾಲಯದ ಪ್ರಧಾನ ಅರ್ಚಕ ವಿನಯ್ ಕುಮಾರ್ ಶರ್ಮ ಉಪಸ್ಥಿತರಿದ್ದರು.
