2004ರಲ್ಲಿ ಪ್ರಧಾನಿ ಹುದ್ದೆ ಸೋನಿಯ ಗಾಂಧಿ ತಿರಸ್ಕರಿಸಿದ್ದೇಕೆ?: ಆತ್ಮಕಥೆಯಲ್ಲಿ 22 ವರ್ಷಗಳ ಹಿಂದಿನ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ!

Bangarappa c journalist
Bangarappa c journalist - Journalist
7 Min Read

2004ರಲ್ಲಿ ಪ್ರಧಾನಿ ಹುದ್ದೆ ಸೋನಿಯ ಗಾಂಧಿ ತಿರಸ್ಕರಿಸಿದ್ದೇಕೆ?: ಆತ್ಮಕಥೆಯಲ್ಲಿ 22 ವರ್ಷಗಳ ಹಿಂದಿನ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ!

ವಿಶೇಷ ವರದಿ ; ಸಂ . ಸಿ ಬಿ.

ನವದೆಹಲಿ: 2004 ರಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಿದ್ದರ ಹಿಂದಿನ ಕಾರಣವೇನು?. ಅಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹೇಗೆ ಪ್ರತಿಕ್ರಿಯಿಸಿದ್ದರು? ಎಂಬ ಕುತೂಹಲಕಾರಿ ಸಂಗತಿಗಳನ್ನು ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ಬಹಿರಂಗಪಡಿಸಿದ್ದಾರೆ.
ನವದೆಹಲಿ: 2004ರ ಲೋಕಸಭಾ ಚುನಾವಣೆಯ ಬಳಿಕ ಪ್ರಧಾನಿ ಹುದ್ದೆ ಅಲಂಕರಿಸುವಂತೆ ಮೈತ್ರಿಕೂಟದ ನಾಯಕರು ತೀವ್ರ ಒತ್ತಡ ಹೇರಿದ್ದರೂ, ಅಂತಿಮವಾಗಿ ಆ ಹುದ್ದೆಯನ್ನು ನಿರಾಕರಿಸಿದ್ದೇಕೆ ಎಂಬುದನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ವಿವರಿಸಿದ್ದಾರೆ.

ಮಂಗಳವಾರ ಬಿಡುಗಡೆಯಾದ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಆತ್ಮಕಥೆಯಲ್ಲಿ ಅಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ತಮ್ಮ ವೈಯಕ್ತಿಕ ಜೀವನದ ಹಲವು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ 544 ಪುಟಗಳ ಈ ಪುಸ್ತಕದಲ್ಲಿ ಕೇಂಬ್ರಿಡ್ಜ್‌ನಲ್ಲಿನ ತಮ್ಮ ಜೀವನ, ರಾಜೀವ್ ಗಾಂಧಿ ಅವರೊಂದಿಗಿನ ವಿವಾಹ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡ ಸಂದರ್ಭಗಳನ್ನು ವಿವರಿಸಿದ್ದಾರೆ. ವಿಶೇಷವಾಗಿ 2004ರಲ್ಲಿ ಪ್ರಧಾನಿ ಹುದ್ದೆಯನ್ನು ತಿರಸ್ಕರಿಸುವ ಮುನ್ನ ತಮ್ಮ ಮನಸ್ಸಿನಲ್ಲಿ ನಡೆದ ತೀವ್ರ ಸಂಘರ್ಷವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಪ್ರಧಾನಿ ಆಗುವುದಿಲ್ಲ ಎಂದು ಮಕ್ಕಳಿಗೆ ಮೊದಲೇ ಹೇಳಿದ್ದ ಸೋನಿಯಾ: 2004ರ ಲೋಕಸಭಾ ಚುನಾವಣೆ ನಡೆಯುವ ಕೆಲವು ತಿಂಗಳುಗಳ ಹಿಂದೆಯೇ ತಾವು ಯಾವುದೇ ಕಾರಣಕ್ಕೂ ಪ್ರಧಾನಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ತಿಳಿಸಿದ್ದಾಗಿ ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.

“ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ನಾನು ಮತ್ತು ನನ್ನ ಮಕ್ಕಳು ಪ್ರಧಾನಿ ಹುದ್ದೆಯ ಬಗ್ಗೆ ಚರ್ಚಿಸಿದ್ದೆವು. ಒಂದು ವೇಳೆ ಕಾಂಗ್ರೆಸ್ ಗೆದ್ದರೆ ಪ್ರಧಾನಿ ಹುದ್ದೆಯನ್ನು ಸ್ವೀಕರಿಸುತ್ತೀರಾ ಎಂದು ಅವರಲ್ಲಿ ಒಬ್ಬರು ನೇರವಾಗಿ ಕೇಳಿದ್ದರು. ಅದಕ್ಕೆ ನಾನು ಖಂಡಿತವಾಗಿಯೂ ಇಲ್ಲ ಎಂದು ಉತ್ತರಿಸಿದ್ದೆ. ನನ್ನ ನಿರ್ಧಾರದ ಬಗ್ಗೆ ನನಗೆ ಸಂಪೂರ್ಣ ಸ್ಪಷ್ಟತೆ ಇದೆ ಎಂದು ಹೇಳಿದ್ದೆ” ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ತಾಯಿ ಪ್ರಧಾನಿಯಾಗುವುದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ: ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ಅಲಂಕರಿಸುವುದನ್ನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಬಯಸಿರಲಿಲ್ಲ. ಇದಕ್ಕೆ ಅವರ ಕುಟುಂಬದಲ್ಲಿ ನಡೆದ ಎರಡು ಭೀಕರ ಘಟನೆಗಳೇ ಪ್ರಮುಖ ಕಾರಣವಾಗಿದ್ದವು. ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯಿಂದ ಇಬ್ಬರೂ ತೀವ್ರ ಆಘಾತ ಅನುಭವಿಸಿದ್ದರು. ಹೀಗಾಗಿ ಪ್ರಧಾನಿ ಹುದ್ದೆ ಎಂದರೆ ಹೆಚ್ಚಿನ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂಬ ಆತಂಕ ಅವರಲ್ಲಿತ್ತು. ತಾವು ಪ್ರಧಾನಿಯಾಗುವುದಿಲ್ಲ ಎಂದು ಹೇಳಿದಾಗ ಇಬ್ಬರೂ ನಿರಾಳರಾಗಿದ್ದರು. ಆ ನಿರ್ಧಾರವನ್ನು ಬಹಿರಂಗವಾಗಿ ಹೇಳಿಕೊಂಡ ಬಳಿಕ ತಮ್ಮ ಮನಸ್ಸಿನ ಭಾರವೂ ಕಡಿಮೆಯಾಗಿತ್ತು ಎಂದು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.

ಮೈತ್ರಿಕೂಟದ ನಾಯಕರ ಒತ್ತಡಕ್ಕೆ ಮಣಿದು ‘ಠೀಕ್ ಹೈ’ ಎಂದಿದ್ದ ಸೋನಿಯಾ!: 2004ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಿದ ಬಳಿಕ ಸೋನಿಯಾ ಗಾಂಧಿ ಅವರ ಮೇಲೆ ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಒತ್ತಡ ಹೆಚ್ಚಾಗಿತ್ತು. ದೆಹಲಿಯ ಜನಪಥ್ ನಿವಾಸದಲ್ಲಿರುವ ರಾಜೀವ್ ಗಾಂಧಿ ಅವರ ಸಭಾಂಗಣದಲ್ಲಿ ಮೈತ್ರಿಕೂಟದ ನಾಯಕರೊಂದಿಗೆ ನಡೆದ ಸಭೆಯನ್ನು ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ವಿವರಿಸಿದ್ದಾರೆ.

ಸಭೆಯಲ್ಲಿ ನಾಯಕರು ಒಬ್ಬೊಬ್ಬರಾಗಿ ಮಾತನಾಡುತ್ತಾ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದರು. ಎಲ್ಲರ ಮಾತುಗಳನ್ನು ಮೌನವಾಗಿ ಆಲಿಸಿದ ಸೋನಿಯಾ, ಕೊನೆಗೆ ತಮ್ಮ ನಿರ್ಧಾರವನ್ನು ತಿಳಿಸಲು ಮುಂದಾಗಿದ್ದರು. ಆದರೆ, ಅವರು ಹುದ್ದೆಯನ್ನು ನಿರಾಕರಿಸುತ್ತಿದ್ದಂತೆಯೇ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

“ನಿಮ್ಮ ಈ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ನೀವು ಹೀಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ನಿರಾಕರಣೆಯನ್ನು ನಾವು ಸ್ವೀಕರಿಸುವುದಿಲ್ಲ” ಎಂದು ನಾಯಕರು ಪಟ್ಟು ಹಿಡಿದಿದ್ದರು. ಕೆಲವರು ತಮ್ಮ ಸುತ್ತಲೂ ನಿಂತು ಒತ್ತಡ ಹೇರಿದ್ದರಿಂದ ತೀವ್ರ ಆತಂಕಕ್ಕೆ ಒಳಗಾದ ಸೋನಿಯಾ ಗಾಂಧಿ, ಕೊನೆಗೆ ಮೆಲ್ಲಗೆ ‘ಠೀಕ್ ಹೈ’ (ಸರಿ) ಎಂದು ಹೇಳಿದ್ದರು. ಅವರ ಮಾತು ಪೂರ್ಣಗೊಳ್ಳುವ ಮೊದಲೇ ನಾಯಕರು ಒಬ್ಬೊಬ್ಬರಾಗಿ ಅಭಿನಂದಿಸಲು ಆರಂಭಿಸಿದ್ದರು ಎಂದು ಪುಸ್ತಕದಲ್ಲಿ ವಿವರಿಸಿದ್ದಾರೆ.

ಕಣ್ಣೀರಿಟ್ಟದ್ದ ಪ್ರಿಯಾಂಕಾ: ಮೈತ್ರಿಕೂಟದ ನಾಯಕರೊಂದಿಗೆ ಸಭೆ ನಡೆಯುತ್ತಿದ್ದಾಗ ಪ್ರಿಯಾಂಕಾ ಗಾಂಧಿ ಕೊಠಡಿಯ ಹೊರಗೆ ನಿಂತಿದ್ದರು. ತಾಯಿ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಂಡಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅವರು ಕಣ್ಣೀರಿಡುತ್ತಾ ರಾಹುಲ್ ಗಾಂಧಿ ಅವರನ್ನು ಹುಡುಕಿಕೊಂಡು ಹೋಗಿದ್ದರು. ಎಲ್ಲರೂ ಅಮ್ಮನನ್ನು ಸುತ್ತುವರಿದಿದ್ದಾರೆ. ಅಮ್ಮ ಒಪ್ಪಿಕೊಂಡಿದ್ದಾರೆ” ಎಂದು ಪ್ರಿಯಾಂಕಾ ಹೇಳುತ್ತಿದ್ದಂತೆಯೇ ರಾಹುಲ್ ಆಘಾತಗೊಂಡಿದ್ದರು. ಇಬ್ಬರೂ ತಕ್ಷಣ ಸೋನಿಯಾ ಗಾಂಧಿ ಅವರ ಬಳಿಗೆ ಬಂದಿದ್ದರು.

“ನೀವು ಒಪ್ಪಿಕೊಂಡಿದ್ದೀರಾ?” ಎಂದು ರಾಹುಲ್ ಕೋಪದಿಂದ ಪ್ರಶ್ನಿಸಿದ್ದರು. “ಅವರು ನನ್ನ ಮಾತನ್ನು ಕೇಳಲೇ ಇಲ್ಲ. ನನಗೆ ಪ್ರಧಾನಿ ಆಗಲು ಇಷ್ಟವಿಲ್ಲ ಎಂಬುದು ನಿಮಗೆ ಗೊತ್ತಿದೆ. ನನ್ನ ಮೇಲೆ ಒತ್ತಡ ಹೇರಿದರು” ಎಂದು ಸೋನಿಯಾ ಉತ್ತರಿಸಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡ ರಾಹುಲ್, “ನಿಮ್ಮ ಮೇಲೆ ಒತ್ತಡ ಹೇರಿದ್ದಾರಾ? ಹಾಗಾದರೆ ನಮ್ಮ ಪರಿಸ್ಥಿತಿ ಏನು?” ಎಂದು ಪ್ರಶ್ನಿಸಿ ಅಲ್ಲಿಂದ ಹೊರನಡೆದಿದ್ದರು. ಆ ಸಂದರ್ಭದಲ್ಲಿ ಪ್ರಿಯಾಂಕಾ ತಾಯಿಗೆ ಧೈರ್ಯ ತುಂಬಿದ್ದರು.

“ಅಮ್ಮ, ಈ ವಿಚಾರದಲ್ಲಿ ನಿಮ್ಮ ನಿರ್ಧಾರ ಮೊದಲಿನಿಂದಲೂ ಸ್ಪಷ್ಟವಾಗಿದೆ. ಯಾರ ಒತ್ತಡಕ್ಕೂ ಮಣಿಯಬೇಡಿ. ನೀವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿರಿ. ಪರಿಸ್ಥಿತಿಯನ್ನು ನಿಭಾಯಿಸಲು ನಾವಿಬ್ಬರೂ ನಿಮ್ಮೊಂದಿಗಿದ್ದೇವೆ” ಎಂದು ಹೇಳಿದ್ದಾಗಿ ಸೋನಿಯಾ ನೆನಪಿಸಿಕೊಂಡಿದ್ದಾರೆ.

ಇಡೀ ರಾತ್ರಿ ಕಾಡಿದ ಗೊಂದಲ: ಮೈತ್ರಿಕೂಟದ ನಾಯಕರ ಒತ್ತಡ ಹಾಗೂ ಮಕ್ಕಳ ಪ್ರತಿಕ್ರಿಯೆಯಿಂದ ಮಾನಸಿಕವಾಗಿ ನೊಂದ ಸೋನಿಯಾ ಗಾಂಧಿ ತಮ್ಮ ಮಲಗುವ ಕೋಣೆಗೆ ತೆರಳಿದ್ದರು. ಅಲ್ಲಿ ಎಂದಿನಂತೆ ಪತಿ ರಾಜೀವ್ ಗಾಂಧಿ ಮಲಗುತ್ತಿದ್ದ ಹಾಸಿಗೆಯ ಭಾಗದಲ್ಲಿ ಮಲಗಿ ತಮ್ಮ ನಿರ್ಧಾರದ ಬಗ್ಗೆ ಆಲೋಚಿಸಿದ್ದರು.

“ನಾನು ಇಟಲಿಯಲ್ಲಿ ಹುಟ್ಟಿ ಬೆಳೆದವಳು. ಈಗ ಜಗತ್ತಿನ ಇನ್ನೊಂದು ತುದಿಯಲ್ಲಿರುವ ನೂರು ಕೋಟಿಗೂ ಹೆಚ್ಚು ಜನಸಂಖ್ಯೆಯ ದೇಶವನ್ನು ಮುನ್ನಡೆಸಲು ನನ್ನನ್ನು ಆಯ್ಕೆ ಮಾಡಲಾಗುತ್ತಿದೆ. ಇದು ನಿಜಕ್ಕೂ ವಿಚಿತ್ರ ಪರಿಸ್ಥಿತಿ” ಎಂಬ ಆಲೋಚನೆ ತಮ್ಮ ಮನಸ್ಸಿನಲ್ಲಿ ಮೂಡಿತ್ತು ಎಂದು ಬರೆದಿದ್ದಾರೆ.

ಅದೇ ಸಮಯದಲ್ಲಿ ಮತ್ತೊಂದು ಆಲೋಚನೆಯೂ ಕಾಡಿತ್ತು. “ಭಾರತ ಈಗ ನನ್ನ ದೇಶ. ನನ್ನ ವಯಸ್ಕ ಜೀವನವನ್ನೆಲ್ಲ ಇಲ್ಲಿಯೇ ಕಳೆದಿದ್ದೇನೆ. ಪತಿಯನ್ನು ಕಳೆದುಕೊಂಡಾಗ ಈ ದೇಶದ ಜನರು ನನ್ನನ್ನು ತಮ್ಮವಳಂತೆ ಸ್ವೀಕರಿಸಿ ಸಾಂತ್ವನ ಹೇಳಿದ್ದಾರೆ. ನನ್ನ ಮೇಲೆ ಮತ್ತು ನನ್ನ ಪಕ್ಷದ ಮೇಲೆ ನಂಬಿಕೆ ಇಟ್ಟಿರುವ ಜನರ ಜವಾಬ್ದಾರಿಯಿಂದ ನಾನು ಹೇಗೆ ಹಿಂದೆ ಸರಿಯಲಿ?” ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಮೂಡಿತ್ತು ಎಂದು ವಿವರಿಸಿದ್ದಾರೆ.

ಈ ಗೊಂದಲದ ನಡುವೆ ಪತಿ ರಾಜೀವ್ ಗಾಂಧಿ ತಮ್ಮೊಂದಿಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹಂಬಲಿಸಿದ್ದಾಗಿಯೂ ತಿಳಿಸಿದ್ದಾರೆ. ‘ನನ್ನ ನಿರ್ಧಾರಕ್ಕೆ ಬದ್ಧಳಾಗುತ್ತೇನೆ’ ಎಂದ ಸೋನಿಯಾ, ತೀವ್ರ ಮಾನಸಿಕ ಒತ್ತಡದಿಂದ ನಿದ್ರೆಗೆ ಜಾರುತ್ತಿದ್ದಾಗ ತಮ್ಮ ಮನಸ್ಸಿನ ಗೊಂದಲಕ್ಕೆ ಉತ್ತರ ಸಿಕ್ಕಿತು ಎಂದು ಬರೆದಿದ್ದಾರೆ.

“ಸೋನಿಯಾ, ನಿನಗೆ ನೀನೇ ಪ್ರಾಮಾಣಿಕಳಾಗಿರು. ನಿನಗೆ ಮೊದಲಿನಿಂದಲೂ ಏನು ಬೇಕೆಂಬುದು ಗೊತ್ತಿದೆ. ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡು” ಎಂದು ತಮ್ಮ ಅಂತರಾತ್ಮ ಹೇಳಿದಂತಾಯಿತು ಎಂದು ವಿವರಿಸಿದ್ದಾರೆ. ಕೆಲವು ಗಂಟೆಗಳ ಬಳಿಕ ಎಚ್ಚರಗೊಂಡ ಅವರು ನೇರವಾಗಿ ರಾಹುಲ್ ಗಾಂಧಿ ಅವರ ಕೊಠಡಿಗೆ ತೆರಳಿದ್ದರು. “ನಾನು ಅಂತಿಮ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಹಿಂದಿನ ನಿಲುವಿಗೆ ಬದ್ಧಳಾಗಿರುತ್ತೇನೆ” ಎಂದು ಮಗನಿಗೆ ತಿಳಿಸಿದ್ದರು. ಆಗ ರಾಹುಲ್ ಗಾಂಧಿ ತಾಯಿಯನ್ನು ಅಪ್ಪಿಕೊಂಡು, “ಇದು ಸರಿಯಾದ ನಿರ್ಧಾರ” ಎಂದು ಹೇಳಿದ್ದಾಗಿ ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ.

ಸಂಸತ್ತಿನಲ್ಲಿ ನಾಟಕೀಯ ಬೆಳವಣಿಗೆ, ಮನಮೋಹನ್ ಸಿಂಗ್ ಹೆಸರು ಘೋಷಣೆ: ಪ್ರಧಾನಿ ಹುದ್ದೆಯನ್ನು ನಿರಾಕರಿಸುವ ತಮ್ಮ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಸಂಸದರಿಗೆ ತಿಳಿಸಿದ ಸಂದರ್ಭವನ್ನೂ ಸೋನಿಯಾ ಗಾಂಧಿ ವಿವರಿಸಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಹಲವು ನಾಯಕರು ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಮನವಿ ಮಾಡಿದ್ದರು. ಆದರೆ, ತಮ್ಮ ಅಂತರಾತ್ಮದ ಧ್ವನಿಗೆ ಕಿವಿಗೊಟ್ಟು ಪ್ರಧಾನಿ ಹುದ್ದೆಯನ್ನು ವಿನಮ್ರವಾಗಿ ನಿರಾಕರಿಸುತ್ತಿರುವುದಾಗಿ ಸೋನಿಯಾ ಘೋಷಿಸಿದ್ದರು.

ಈ ಘೋಷಣೆಯ ಬೆನ್ನಲ್ಲೇ ಸಭೆಯಲ್ಲಿ ಗದ್ದಲ ಉಂಟಾಗಿತ್ತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಅವರನ್ನು ಕೆಲಕಾಲ ಸಭೆಯಿಂದ ಹೊರಗೆ ಕರೆದೊಯ್ಯಲಾಗಿತ್ತು. ಬಳಿಕ ಮತ್ತೆ ಸಭೆಗೆ ಮರಳಿದ ಸೋನಿಯಾ ಗಾಂಧಿ, ತಮ್ಮ ಬದಲಿಗೆ ಮತ್ತೊಬ್ಬ ನಾಯಕನನ್ನು ಆಯ್ಕೆ ಮಾಡಲು ಅವಕಾಶ ನೀಡುವಂತೆ ಸಂಸದರಲ್ಲಿ ಮನವಿ ಮಾಡಿದ್ದರು. ನಾಯಕರು ಒಪ್ಪಿಗೆ ಸೂಚಿಸಿದ ಬಳಿಕ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಘೋಷಿಸಿದ್ದರು. ಇದರಿಂದ ಸಭಾಂಗಣದಲ್ಲಿ ಚಪ್ಪಾಳೆ ಮೊಳಗಿತ್ತು. ಕೆಲವರು ಘೋಷಣೆ ಕೂಗಿದರೆ, ಮತ್ತಿತರರು ಭಾವುಕರಾಗಿ ಕಣ್ಣೀರಿಟ್ಟಿದ್ದರು. ಅಲ್ಲಿಯೇ ಇದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು.

“ನನ್ನ ಮಕ್ಕಳು ಕೂಡ ಚಪ್ಪಾಳೆ ತಟ್ಟುತ್ತಿರುವುದನ್ನು ಗಮನಿಸಿದೆ. ಬಳಿಕ ನನ್ನ ಕಾಗದಗಳನ್ನು ತೆಗೆದುಕೊಂಡು ಅಲ್ಲಿಂದ ಹೊರನಡೆದೆ. ಕೊನೆಗೂ ಆ ಕಠಿಣ ಪರೀಕ್ಷೆ ಮುಗಿದಿತ್ತು” ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ಬಳಿಕ ಡಾ. ಮನಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಸೋನಿಯಾ ಗಾಂಧಿ ಅವರ ಆತ್ಮಕಥೆಯ ಮೂಲಕ ಅಂದಿನ ರಾಜಕೀಯ ಬೆಳವಣಿಗೆಗಳ ಕುರಿತ ಮಾಹಿತಿ ಬಹಿರಂಗಗೊಂಡಿದೆ.
ನನ್ನ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆ ಬಳಿಕ ‘ಚರ್ಚೆ’ ನಡೆಯೋದು ಗ್ಯಾರಂಟಿ’: ಸೋನಿಯಾ ಗಾಂಧಿ
ಇನ್​​ಸ್ಟಾಗ್ರಾಮ್​​ಗೆ ಕಾಲಿಟ್ಟ ಸೋನಿಯಾ ಗಾಂಧಿ: ತಮ್ಮ ಮುಂಬರುವ ಆತ್ಮಚರಿತ್ರೆಯ ಪುಸ್ತಕ ಪ್ರದರ್ಶಿಸಿ ಪೋಸ್ಟ್​

Share This Article