*ನಾಗಮಂಗಲದಲ್ಲಿ ಶ್ರೀ ಕೋಟೆ ವಿದ್ಯಾ ಗಣಪತಿಯ ಅದ್ದೂರಿ ವಿಸರ್ಜನಾ ಮಹೋತ್ಸವ*
·
ಚುಂಚಶ್ರೀಗಳಿಂದ ಪೂಜಾ ಕೈಂಕರ್ಯ ನೆರವೇರಿಸಿ ಚಾಲನೆ – ಭಕ್ತಸಾಗರದ ನಡುವೆ ವೈಭವದ ಮೆರವಣಿಗೆ
ನಾಗಮಂಗಲ, ನ. 6: ಇತಿಹಾಸ ಪ್ರಸಿದ್ಧ ನಾಗಮಂಗಲ ಪಟ್ಟಣದ ಶ್ರೀ ಕೋಟೆ ವಿದ್ಯಾ ಗಣಪತಿಯ 74ನೇ ವರ್ಷದ ವಿಸರ್ಜನಾ ಮಹೋತ್ಸವವು ಶುಕ್ರವಾರ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶ್ರೀ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಗಣಪತಿಯ ದರ್ಶನ ಪಡೆದು ಪುನೀತರಾದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಶ್ರೀ ಕೋಟೆ ವಿದ್ಯಾ ಗಣಪತಿಯ ಮೆರವಣಿಗೆ ಭಕ್ತರ ಕಣ್ಮನ ಸೆಳೆಯಿತು. ಟಿಬಿ ವೃತ್ತಕ್ಕೆ ಗಣಪತಿಯ ಆಗಮನವಾಗುತ್ತಿದ್ದಂತೆ ಸಾರ್ವಜನಿಕರು ಹಾಗೂ ಭಕ್ತಾದಿಗಳು ಪುಷ್ಪಾರ್ಚನೆ ಸಲ್ಲಿಸಿ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವೃತ್ತದ ಸುತ್ತಮುತ್ತ ಸಾವಿರಾರು ಜನರು ಜಮಾಯಿಸಿ ಗಣಪತಿಯ ದರ್ಶನ ಪಡೆದರು.
ಮೆರವಣಿಗೆಯಲ್ಲಿ ಡಿಜೆ ಸಂಗೀತದ ಅಬ್ಬರಕ್ಕೆ ಯುವತಿಯರು ಹಾಗೂ ಮಹಿಳೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಚೋಡೆತ್ತುಗಳು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು. ವೀರಗಾಸೆ, ಪಟ್ಟದ ಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು. ಕಲಾವಿದರ ಪ್ರದರ್ಶನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ವಿವಿಧೆಡೆ ಪ್ರಸಾದ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾವಿರಾರು ಜನರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆರವಣಿಗೆಯುದ್ದಕ್ಕೂ ಭದ್ರತಾ ವ್ಯವಸ್ಥೆ ಮತ್ತು ಜನದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಸುರೇಶ್ ಗೌಡ ಮಂಡ್ಯ ಎಂ ಡಿ ಸಿ ಸಿ ಬ್ಯಾಂಕ್ ಜಿಲ್ಲಾಧ್ಯಕ್ಷರಾದ ಸಚಿನ್ ಚೆಲುವರಾಯಸ್ವಾಮಿ ಸುನಿಲ್ ಲಕ್ಷ್ಮಿಕಾಂತ್ ಪೊಲೀಸ ವರಿಷ್ಠಾಧಿಕಾರಿ ಶೋಭಾರಾಣಿ ಡಿವೈಎಸ್ಪಿ ಚೆಲುವರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು
