ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ವಿದಾಯ ಭಾಷಣ – ನಗರದ ಅಭಿವೃಧ್ಧಿ ಮೆಲುಕು

ದೇಶದಲ್ಲಿಯೇ ಹಲವು ಪ್ರಥಮಗಳಿಗೆ ನಗರಸಭೆ ಮಾದರಿ
ರಾಮನಗರ :
ಕಳೆದ ಎರಡು ವರ್ಷಗಳಲ್ಲಿ ಮಾದರಿ ನಗರಸಭೆ ನಿರ್ಮಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು, ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಉತ್ತಮ ರೀತಿಯಲ್ಲಿ ಪಕ್ಷಾತೀತವಾಗಿ ಸ್ಪಂದನೆ ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರಸಭೆಯ ನೂತನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ನಗರಸಭೆ ಅಡಳಿತದ ಕೊನೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿ ನಡೆದಿರುವ ಕೆಲಸಗಳು ಇಡೀ ರಾಜ್ಯದಲ್ಲಿ ಹಲವು ಪ್ರಥಮಗಳಿಗೆ ನಾಂದಿ ಹಾಡಿದೆ. 650 ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ, ಬಟ್ಟೆ ಬ್ಯಾಗುಗಳ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಸಾಲ ವಿತರಣೆ, ಒಂದು ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳ ವಿತರಣೆ, ಉದ್ಯಾನಗಳ ಅಭಿವೃದ್ಧಿ, ವಾಚನಾಲಯ ಪ್ರಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ.
ಅಸಂಘಟಿತ ಕಾರ್ಮಿಕರಿಗೆ ಐದು ಲಕ್ಷ ರೂಗಳ ವಿಮಾ ಸೌಲಭ್ಯ ಒದಗಿಸಿರುವುದು ದೇಶದಲ್ಲಿಯೇ ಪ್ರಥಮವಾಗಿದೆ. ರಾಮನಗರದ ಸಮಗ್ರ ಅಭಿವೃದ್ಧಿಗೆ 750 ರೂ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 20 ಸಾವಿರ ಇ ಖಾತೆ ವಿತರಿಸಲಾಗಿದೆ ಎಂದರು.
ನಗರದಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ದೇವಾಲಯ, ದರ್ಘಾಗಳಿಗೆ ಸಹಾಯಧನ ನೀಡಲಾಗಿದೆ. ಸಮಾಜದಲ್ಲಿ ಸಮಾನತೆ ಸಾರುವ ಮಹಾ ಪುರುಷರಾದ ವಚನಕಾರ ಬಸವಣ್ಣ, ನಾಡಪ್ರಭು ಕೆಂಪೇಗೌಡ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ಥಳಿಗಳು ಸೇರಿದಂತೆ 3ಡಿ ತಂತ್ರಾಂಶದ ಸಂವಿಧಾನ ಪೀಠಿಕೆ ಸ್ಥಾಪಿಸಲಾಗಿದೆ ಎಂದರು.
ಆಹಾರ ಸಂಸ್ಕೃತಿ ಬೆಳೆಸಲು ಫುಡ್ ಕೋರ್ಟ್ ನಿರ್ಮಾಣ, ದೇಶದ ಶ್ರೀನಗರ ಲಾಲ್ ಚೌಕ್ ನಲ್ಲಿ ಇರುವಂತೆ ಕ್ಲಾಕ್ ಟವರ್ ನಿರ್ಮಾಣ ರಾಮನಗರದ ಅಭಿವೃದ್ಧಿಗೆ ಹೊಸ ಆಯಾಮ ಕೊಟ್ಟಿದೆ ಎಂದು ತಮ್ಮ ಅವಧಿಯಲ್ಲಿ ನಡೆದಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೆ ಸಂಧರ್ಭದಲ್ಲಿ ಫುಡ್ ಕೋರ್ಟ್ ನಲ್ಲಿ ನಿರ್ಮಿಸಲಾಗಿರುವ 37 ಆಹಾರ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಂಟು ಮಳಿಗೆಗಳಿಗೆ ತಲಾ ಒಬ್ಬರೆ ಅರ್ಜಿ ಸಲ್ಲಿಸಿದ್ದು, ಒಂದು ಮಳಿಗೆಗೆ ಯಾರೂ ಅರ್ಜಿ ಸಲ್ಲಿಸಿಲ್ಲ ಹಾಗಾಗಿ ಹರಾಜು ಪ್ರಕ್ರಿಯೆ ದಿನಾಂಕವನ್ನು ಮುಂದೂಡಲಾಗಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಆಯುಕ್ತ ಡಾ.ಜಯಣ್ಣ, ಸ್ಥಾಯಿಸಮಿತಿ ಅಧ್ಯಕ್ಷ ಮಹಮದ್ ಆರಿಫ್ ಇದ್ದರು.
