*ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕೆ.ರಮೇಶ್ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಕಾರ್ಯಕರ್ತರ ಮನವಿ*

ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಳಪತಿಗಳ ಅಬ್ಬರ ಇದ್ದಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಪಾಳಯಕ್ಕೆ ಬಂದು ನಾಲ್ಕು ದಶಕಗಳ ಕಾಲ ಅತ್ಯಂತ ಪ್ರಾಮಾಣಿಕ, ಪಕ್ಷ ನಿಷ್ಠೆ ಮತ್ತು ವಿಶ್ವಾಸದಿಂದ ಕಾರ್ಯ ನಿರ್ವಹಿಸುತ್ತಿರುವ ಕೆ.ರಮೇಶ್ ಅವರಿಗೆ ರಾಜ್ಯ ಮಟ್ಟದ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಗಾದಿಯನ್ನು ನೀಡಬೇಕೆಂಬ ಕೂಗು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ಕೇಳಿ ಬರುತ್ತಿದೆ.
1987 ರಲ್ಲಿ ರಾಮನಗರ ಕ್ಷೇತ್ರದಲ್ಲಿ ಜನತಾ ಪಕ್ಷದ್ದೇ ಕಾರುಬಾರು. ಇಂತಹ ಸಂದರ್ಭದಲ್ಲಿ 25ರ ಯುವಕ ಕೆ.ರಮೇಶ್ ಅವರು ಕಾಂಗ್ರೆಸ್ ಪಕ್ಷದಲ್ಲಿ ತಾನು ಅಸ್ತಿತ್ವ ಪಡೆದುಕೊಳ್ಳುತ್ತೇನೆ ಎಂಬ ಹಂಬಲ ಮತ್ತು ಹುಮ್ಮಸ್ಸಿನಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇರ್ಪಡೆಗೊಂಡರು. ಅಂದಿನಿಂದ ಇಂದಿನವರೆಗೆ 39 ವರ್ಷಗಳ ಕಾಲ ತಮ್ಮ ಇಡೀ ಜೀವನವನ್ನೇ ಕಾಂಗ್ರೆಸ್ ಪಕ್ಷಕ್ಕೆ ಮುಡಿಪಾಗಿಟ್ಟು ಕೆಲಸ ಮಾಡಿ ಅತ್ಯಂತ ಪ್ರಾಮಾಣಿಕರಾಗಿ ಗುರುತಿಸಿಕೊಂಡಿದ್ದಾರೆ.
1989ರಲ್ಲಿ ಹಿರಿಯ ರಾಜಕೀಯ ಮುತ್ಸದ್ದಿ ಸಿ.ಎಂ.ಲಿಂಗಪ್ಪ ಅವರು ಶಾಸಕ ಸ್ಥಾನಕ್ಕೆ ಸ್ಪರ್ದೆ ಮಾಡಿದ ಸಂದರ್ಭದಲ್ಲಿ ಮುಂಚೂಣಿ ಯುವ ನಾಯಕನಾಗಿ ಇವರು ಗುರ್ತಿಸಿಕೊಂಡರು. ಅಂದಿನಿಂದ ಇಂದಿನವರೆಗೆ ಗ್ರಾಮ ಪಂಚಾಯಿತಿ, ಸೊಸೈಟಿ, ತಾಲೂಕ ಪಂಚಾಯತಿ, ಜಿಲ್ಲಾ ಪಂಚಾಯತಿ, ಸಂಸತ್ ಚುನಾವಣೆ, ಶಾಸಕ ಸ್ಥಾನದ ಚುನಾವಣೆ ಯಾವುದೇ ಬಂದರೂ ಕೂಟಗಲ್ ಹೋಬಳಿ ಮತ್ತು ರಾಮನಗರ ಕ್ಷೇತ್ರದಲ್ಲಿ ಇವರ ನಾಯಕತ್ವ ಮುಂದುವರಿದುಕೊಂಡು ಬಂದಿದೆ.
1993ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು ಸಹ ಗೆಲುವನ್ನು ಪಡೆಯಲು ಸಾಧ್ಯವಾಗಲಿಲ್ಲ. ಎಲ್ಲೋ ಒಂದು ಕಡೆ ಈ ಸೋಲು ಅವರನ್ನು ರಾಜಕೀಯ ಜೀವನದಲ್ಲಿ ಉತ್ತಂಗಕ್ಕೆ ಕೊಂಡೊಯಿತು ಎನ್ನುವುದರಲ್ಲಿ ಸಂಶಯವಿಲ್ಲ. 1994ರಲ್ಲಿ ಎಚ್.ಡಿ.ದೇವೇಗೌಡರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಶತಾಯಗತಾಯ ಸಿ.ಎಂ. ಲಿಂಗಪ್ಪನವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟು ಅವಿರತ ದುಡಿದರು. ಇದೆ ರೀತಿ 1997ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಿ.ಎಂ.ಲಿಂಗಪ್ಪನವರ ಗೆಲುವು ಕೆ.ರಮೇಶ್ ಅವರ ರಾಜಕೀಯ ಬದುಕಿಗೆ ಹೊಸ ದಾರಿಯೊಂದಕ್ಕೆ ನಾಂದಿ ಹಾಡಿತು.
*ಪಕ್ಷದ ನಿಷ್ಠೆಗೆ ಒಲಿದ ಜಿಪಂ ಅಧ್ಯಕ್ಷ ಸ್ಥಾನ*
ಸಿ.ಎಂ.ಲಿಂಗಪ್ಪ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ 2000ನೇ ಇಸವಿನಲ್ಲಿ ನಡೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕೂಟಗಲ್ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಜಿಲ್ಲಾಮಟ್ಟದಲ್ಲಿ ತಮ್ಮ ರಾಜಕೀಯ ಇಮೇಜ್ ಹೆಚ್ಚಿಸಿಕೊಂಡರು.
2001ರಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ಇವರು ಸತತ 12 ವರ್ಷಗಳ ಕಾಲ ಪಕ್ಷದ ಅಸ್ತಿತ್ವಕ್ಕೆ ಹೊಸ ಶಕ್ತಿ ನೀಡಿದರು. ಇವರ ಪಕ್ಷನಿಷ್ಠೆಗೆ ಅಂದು ಸಹಕಾರ ಸಚಿವ ಹಾಗೂ ಸೂಪರ್ ಸಿಎಂ ಇಂದೇ ಗುರುತಿಸಿಕೊಂಡಿದ್ದ ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆ.ರಮೇಶ್ ಅವರಿಗೆ ಜಿಲ್ಲಾ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಸಿಗಲು ಬೆನ್ನೆಲುಬಾದರು. ಹೀಗಾಗಿ ಅಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಡಿಮೆ ಅವಧಿಯಲ್ಲಿಯೂ ಅತ್ಯಂತ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದರು ಎಂದರೆ ತಪ್ಪಾಗುವುದಿಲ್ಲ.
2001ರಲ್ಲಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಪಿ.ನಾಗರಾಜ್ ಅವರು ಸ್ಪರ್ಧೆ ನಡೆಸಿದ ಸಂದರ್ಭದಲ್ಲಿ ಅವರ ಶ್ರಮಕ್ಕೆ ಹೆಗಲುಕೊಟ್ಟು ಅವರ ಗೆಲುವಿಗೆ ಶ್ರಮಿಸಿದರು. ಈ ಗೆಲುವು ಪಿ.ನಾಗರಾಜ್ ಅವರ ಹೊಸ ರಾಜಕೀಯ ಬದುಕಿಗೆ ನಾಂದಿ ಹಾಡಿತು. ಅಂದಿನಿಂದ ಹಿಂದಿನವರೆಗೂ ನಾಗರಾಜ್ ರವರು ತಮ್ಮ ರಾಜಕೀಯ ಜೀವನದಲ್ಲಿ ಹಿನ್ನಡೆ ಅನುಭವಿಸಿಲ್ಲ. ಅಲ್ಲದೆ ಇದೇ ನಿರ್ದೇಶಕ ಸ್ಥಾನವು ಅವರಿಗೆ ಬೆಂಗಳೂರು ಡೇರಿಯಿಂದ ಕೆಎಂಎಫ್ ಅಧ್ಯಕ್ಷ ಸ್ಥಾನದ ಗಾದಿಗೆ ಮುಟ್ಟಿಸಿತು ಎಂಬುದು ಈಗ ಇತಿಹಾಸ.
*ಪಕ್ಷದ ನಿಷ್ಠೆಗೆ ಮತ್ತೊಂದು ಹೆಸರೇ ಕೆ.ರಮೇಶ್*
ತಮಗೆ ಹಾಗೂ ಪಕ್ಷದ ಅಸ್ತಿತ್ವಕ್ಕೆ ಎಷ್ಟೇ ತೊಂದರೆ ಬಂದರು, ಕಾಂಗ್ರೆಸ್ ಪಕ್ಷದ ನಿಷ್ಠೆಯನ್ನು ಬಿಟ್ಟುಕೊಡದೆ ತಮ್ಮ ಬದುಕನ್ನು ಇದಕ್ಕಾಗಿಯೇ ಮೀಸಲಾಗಿಟ್ಟು, ಕಾಂಗ್ರೆಸ್ ಪಕ್ಷದ ನಿಷ್ಠೆಗೆ ಮತ್ತೊಂದು ಹೆಸರೇ ಕೆ.ರಮೇಶ್ ಎಂದು ಗುರುತಿಸಿಕೊಂಡವರು ಇವರು.
ಪಕ್ಷ ಅಧಿಕಾರದಲ್ಲಿರಲಿ ಬಿಡಲಿ ವರಿಷ್ಠರು ಹೇಳುವ ಕೆಲಸವನ್ನು ಚಾಚು ತಪ್ಪದೆ ಮಾಡುವುದಷ್ಟೇ ನನ್ನ ಕೆಲಸ ಎಂದುಕೊಂಡು ಇದುವರೆಗೂ ಅದನ್ನು ಶಿರಸಾವಹಿಸಿ ಪಾಲಿಸಿಕೊಂಡು ಬಂದಿದ್ದಾರೆ. ಯಾವುದೇ ಚುನಾವಣೆ ಬರಲಿ ಕಾರ್ಯತಂತ್ರ ರೂಪಿಸುವುದು, ವಿರೋಧಪಕ್ಷದಲ್ಲಿ ಇದ್ದಾಗ ಆಡಳಿತ ಪಕ್ಷದ ವಿರುದ್ಧ ಬೀದಿಗಿಳಿದು ಪ್ರತಿಭಟನೆ, ಹೋರಾಟ ನಡೆಸುವುದು, ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ನಡೆಸುವ ರ್ಯಾಲಿಗಳಲ್ಲಿ ತಮ್ಮದೇ ಮುಂಚೂಣಿ ಪಾತ್ರವನ್ನು ಇವರು ವಹಿಸಿಸಿಕೊಂಡು ಬಂದಿದ್ದಾರೆ.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಭಾಗವಹಿಸಿ ಶುಭಕೋರುವುದು ಅಥವಾ ಯಾವುದೆ ಕಾರ್ಯಕರ್ತರ ಮನೆಗಳಲ್ಲಿ ಸಾವು, ನೋವಿನ ಘಟನೆ ನಡೆದ ಸಂದರ್ಭದಲ್ಲಿ ಪಕ್ಷದ ಪರವಾಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದು ಕಳೆದ 40 ವರ್ಷಗಳಿಂದ ನಡೆದುಕೊಂಡು ಬಂದಿದೆ. ಹೀಗಾಗಿ ಇವರ ಮೇಲೆ ಕಾರ್ಯಕರ್ತರ ಮತ್ತು ಮುಖಂಡರಿಗೆ ಇನ್ನಿಲ್ಲದ ವಿಶ್ವಾಸ.
ಲೋಕಸಭಾ ಕ್ಷೇತ್ರಕ್ಕೆ ಡಿ.ಕೆ.ಸುರೇಶ್ ಅವರು ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಭಾಗಗಳಲ್ಲಿ ತಮ್ಮದೇ ಆದ ಕಾರ್ಯಕರ್ತರ ಪಡೆಯೊಂದಿಗೆ ಡಿ.ಕೆ.ಸುರೇಶ್ ಅವರ ಗೆಲುವಿಗೆ ಹಗಲು, ರಾತ್ರಿ ಎನ್ನದೆ ಶ್ರಮಿಸಿದ್ದಾರೆ.
ಹೀಗಾಗಿಯೇ ಇವರನ್ನು ಪಕ್ಷವು ಸಹ ಅತ್ಯಂತ ಉತ್ತಮ ರೀತಿಯಲ್ಲಿ ನಡೆಸಿಕೊಂಡಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 12 ವರ್ಷ ಎರಡು ಬಾರಿ ಕೆಪಿಸಿಸಿ ಸದಸ್ಯರಾಗಿ ಆಯ್ಕೆಯಾಗಿ ಪಕ್ಷವು ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಣೆ ಮಾಡಿದ್ದಾರೆ. ಭಾರತ್ ಚೋಡೊ ಪಾದಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದ ಇವರು, ಮೇಕೆದಾಟಿನಿಂದ ನಡೆದ ನಮ್ಮ ನೀರು ನಮ್ಮ ಹಕ್ಕು ಪಾದಾ ಯಾತ್ರೆಯಲ್ಲಿಯೂ ಮುಂಚೋಣಿ ಪಾತ್ರವನ್ನು ವಹಿಸಿ ರಾಮನಗರ ಕಾಂಗ್ರೆಸ್ ಪಕ್ಷದ ಹೆಸರಿಗೆ ಒಂದು ಹೊಸ ಇಮೇಜ್ ಅನ್ನು ಕಲ್ಪಿಸಿಕೊಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬಳ್ಳಾರಿ ಪಾದಯಾತ್ರೆಯಲ್ಲಿಯೂ ಪಾಲ್ಗೊಂಡು ಗಮನ ಸೆಳೆದಿದ್ದ ಇವರು, ಕೊಪ್ಪಳ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಉಪಚುನಾವಣೆ ನಡೆದರು ಪಕ್ಷದ ಸಾಮಾನ್ಯ ಕಾರ್ಯಕರ್ತಂತೆ ಹೋಗಿ ಪಕ್ಷದ ಪರವಾಗಿ ಮತಯಾಚನೆ ಮಾಡಿದ್ದಾರೆ. ರಾಮನಗರ ಕ್ಷೇತ್ರದ ವಿಧಾನಸಭೆಗೆ ಕಳೆದ ಮೂರೂವರೆ ದಶಕರಿಂದ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಇವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ
ಐದು ಬಾರಿ ಹಿರಿಯ ಮುತ್ಸದ್ದಿ ಸಿ.ಎಂ.ಲಿಂಗಪ್ಪನವರಿಗೆ ಒಂದು ಬಾರಿ ಮರಿದೇವರು, ಮಮತಾ ನಿಚ್ಚಾನಿ, ಎರಡು ಬಾರಿ ಇಕ್ಬಾಲ್ ಹುಸೇನ್ ಸೇರಿದಂತೆ, ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ತೇಜಸ್ವಿನಿ ರಮೇಶ್, ವಿಧಾನಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ರವಿ, ಪುಟ್ಟಣ್ಣ ಸೇರಿದಂತೆ ಪಕ್ಷದ ವರಿಷ್ಠರು ಹೇಳಿದ ಅಭ್ಯರ್ಥಿಗೆ ನಿಷ್ಠೆಯಿಂದ ಕೆಲಸ ಮಾಡಿಕೊಂಡು ತಮ್ಮದೇ ಆದ ರೀತಿಯಲ್ಲಿ ಪಕ್ಷದ ಬುನಾದಿಯಲ್ಲಿ ಒಂದು ಹೆಸರನ್ನು ಸ್ಥಾಪಿಸಿಕೊಂಡಿದ್ದಾರೆ
*ಡಿಕೆಸಿ ಸಿಎಂ ಆಗಲೆಂದು ಅವಿರತ ಶ್ರಮ*
ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಬಯಸುತ್ತಿದ್ದರು. ಅವರಲ್ಲಿ ಕೆ.ರಮೇಶ್ ಅವರ ಬಯಕೆಯು ಸಹ ಮೊದಲನೆಯದಾಗಿ ನಿಲ್ಲುತ್ತದೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಅತ್ಯಂತ ಆಪ್ತ ಬಳಗದಲ್ಲಿ ಇವರು ಸಹ ಮಂಚೋಣಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಇದೀಗ ಮುಖ್ಯಮಂತ್ರಿ ಗಾದಿ ಅಲಂಕರಿಸಿರುವ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ಕೆ.ರಮೇಶ್ ಅವರಿಗೆ ರಾಜ್ಯಮಟ್ಟದ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ಕಲ್ಪಿಸಲಿ ಎಂದು ಸಹಸ್ರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರ ಆಶಯವಾಗಿದೆ.
39 ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಅಧಿಕಾರ ಅಂತಸ್ತು ಅನುಭವಿಸಿದ್ದಕ್ಕಿಂತ ಹಣ ಆಸ್ತಿಯನ್ನು ಕಳೆದುಕೊಂಡು ಪಕ್ಷ ಕಟ್ಟಿದವರಲ್ಲಿ ಇವರು ಸಹ ಒಬ್ಬರಾಗಿದ್ದಾರೆ. ಇವರ ಪ್ರಾಮಾಣಿಕತೆ ಮತ್ತು ನಿಷ್ಠೆಗಾಗಿ ಈಗಲಾದರೂ ಒಂದು ಶಕ್ತಿ ತುಂಬಲು ಇದೊಂದ ಕೊನೆಯ ಅವಕಾಶವಾಗಿದೆ ಎಂಬ ಆಶಯ ಹೊಂದಿರುವ ಕಾಂಗ್ರೆಸ್ ಕಾರ್ಯಕರ್ತರು ಕೆ.ರಮೇಶ್ ಅವರಿಗೆ ಸೂಕ್ತ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಗೆ ಮನವಿ ಮಾಡಿದ್ದಾರೆ.
