ಬೋರ್‌ವೆಲ್‌ಗಳ ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಹಿಡಿದಿರುವ ಗ್ರಾಮಸ್ಥರು ಕಳ್ಳರಿಗೆ ಧರ್ಮದೇಟು


ಬೇಲೂರು : ಬೋರ್‌ವೆಲ್‌ಗಳ ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಹಿಡಿದಿರುವ ಗ್ರಾಮಸ್ಥರು ಕಳ್ಳರಿಗೆ ಧರ್ಮದೇಟು ನೀಡಿದ ನಂತರ ಪೊಲೀಸರಿಗೆ ಒಪ್ಪಿಸಿರುವ ಘಟನೆ ವರದಿಯಾಗಿದೆ.
ಪಟ್ಟಣದ ಹೊರವಲಯದ ರಾಯಪುರ ಗ್ರಾಮದ ಸುತ್ತಮುತ್ತಲಲ್ಲಿ ಕಳೆದ ಎರಡು, ಮೂರು ತಿಂಗಳಿನಿಂದ ರೈತರು ತಮ್ಮ ಜಮೀನುಗಳಿಗೆ ನೀರು ಹರಿಸಲು ಹಾಕಿದ್ದ ಬೋರ್‌ವೆಲ್‌ಗಳ ಕೇಬಲ್‌ಗಳು ಕಳ್ಳತನವಾಗುತ್ತಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡ ಸಮಯದಲ್ಲಿ ಕಲ್ಲಿನಿಂದ ಕೇಬಲ್‌ಗಳನ್ನು ತುಂಡರಿಸಿ ಕಳ್ಳತನ ಮಾಡಲಾಗುತ್ತಿತ್ತು. ಕೆಲವೆಡೆ ಮೋಟರ್‌ಗಳನ್ನು ಕದ್ದಿದ್ದರೆ ಮತ್ತೆ ಕೆಲವೊಮ್ಮೆ ಮೋಟರ್‌ಗಳನ್ನು ಬೀಳಿಸಿ ಹೋಗುತ್ತಿದ್ದರು. ಇದರಿಂದ ರೈತರಿಗೆ ಸಾವಿರಾರು ರೂ.ಗಳ ನಷ್ಠವಾಗಿತ್ತು.
ಶುಕ್ರವಾರ ಬೆಳಗ್ಗೆ ಕೇಬಲನ್ನು ಕದ್ದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಳ್ಳರನ್ನು ನೋಡಿದ ಗ್ರಾಮಸ್ಥರು ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಕಳ್ಳತನದಿಂದ ಬೇಸತ್ತು ಆಕ್ರೋಶಗೊಂಡಿದ್ದ ರೈತರು ಕಳ್ಳರಿಗೆ ಧರ್ಮದೇಟು ನೀಡಿ ಆ ನಂತರ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳರ ಹೆಸರು ಹಾಗೂ ಅವರು ಕದ್ದ ಕೇಬಲನ್ನು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ವಿಚಾರಗಳು ಇನ್ನಷ್ಟೆ ತಿಳಿಯಬೇಕಿದೆ.
