ರಾಜ್ಯ ಸರ್ಕಾರ ಜನರಿಂದ ದರೋಡೆ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ

Bangarappa c journalist
Bangarappa c journalist - Journalist
3 Min Read

ರಾಜ್ಯ ಸರ್ಕಾರ ಜನರಿಂದ ದರೋಡೆ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ

ಉಸಿರಾಡುವ ಗಾಳಿಗೂ ದರ ನಿಗದಿಪಡಿಸುವ ದಿನ ದೂರವಿಲ್ಲ; ಸರ್ಕಾರದ ಖಜಾನೆ ತುಂಬಿಸಲು ಜನರ ಮೇಲೆ ಹೊರೆ

ಹಲಗೂರು: ರಾಜ್ಯದಲ್ಲಿ ಫುಟ್‌ಪಾತ್‌ ಮೇಲೆ ಸಂಚರಿಸುವ ವಾಹನಗಳಿಗೆ ದಂಡ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದು, ಸರ್ಕಾರ ಜನರಿಂದ ದರೋಡೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಮಳವಳ್ಳಿ ತಾಲ್ಲೂಕಿನ ಗುಂಡಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರ ಸಮಾಜದ ಬದಲಾವಣೆಗಾಗಿ ಕೈಗೊಂಡಿರುವ ಕ್ರಮವಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಅದನ್ನು ತುಂಬಿಸಿಕೊಳ್ಳಲು ಜನರ ಮೇಲೆ ವಿವಿಧ ರೀತಿಯ ದಂಡ ಹಾಗೂ ಆರ್ಥಿಕ ಹೊರೆಗಳನ್ನು ಹೇರುತ್ತಿದೆ. ಮುಂದೊಂದು ದಿನ ಜನರು ಉಸಿರಾಡುವ ಗಾಳಿಗೂ ದರ ನಿಗದಿಪಡಿಸುತ್ತಾರೋ ಏನೋ ಎಂದು ವ್ಯಂಗ್ಯವಾಡಿದರು.

ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಟೀಕೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮೇಕೆದಾಟು ವಿಚಾರವನ್ನು ಯಾವಾಗ ಪ್ರಸ್ತಾಪಿಸಬೇಕು ಎಂಬುದು ನನಗೆ ಗೊತ್ತಿದೆ. ಸದ್ಯ ಕಾಂಗ್ರೆಸ್ ನಾಯಕರು ಬಹಳ ವೇಗವಾಗಿ ಮಾತನಾಡುತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ತರುವ ಅವರ ವೇಗ ಎಷ್ಟಿದೆ ಎಂಬುದನ್ನು ಕಾದು ನೋಡೋಣ. ಈ ವಿಚಾರವಾಗಿ ಮುಂದೆ ಮಾತನಾಡುತ್ತೇನೆ ಎಂದು ಹೇಳಿದರು.

ಎಆರ್‌ಎಐ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಜಾಗ ಇನ್ನೂ ಮಂಜೂರಾಗಿಲ್ಲ

ಬಸರಾಳು ಬಳಿ ಜಾಗ ನೀಡಲಿ; ಕೈಗಾರಿಕೆಗಳಿಗೆ ಮೂಲಸೌಕರ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ

ಮಂಡ್ಯ ಜಿಲ್ಲೆಯಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದುವರೆಗೆ ಅಗತ್ಯ ಭೂಮಿಯನ್ನು ಮಂಜೂರು ಮಾಡಿಲ್ಲ. ಭೂಮಿಯನ್ನೇ ನೀಡದಿದ್ದರೆ ಘಟಕವನ್ನು ಎಲ್ಲಿಂದ ತಂದು ಸ್ಥಾಪಿಸಲಿ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಮಳವಳ್ಳಿ ತಾಲ್ಲೂಕಿನ ಗುಂಡಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಆರ್‌ಎಐ ಘಟಕ ಸ್ಥಾಪನೆಗೆ ಜಿಲ್ಲೆಯಲ್ಲಿ ಎಲ್ಲಿಯಾದರೂ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಬಸರಾಳು ಗ್ರಾಮದ ಸಮೀಪವೇ ಜಾಗ ನೀಡಿದರೂ ಅಭ್ಯಂತರವಿಲ್ಲ. ಆದರೆ, ಇದುವರೆಗೆ ಕೆಐಎಡಿಬಿಗೆ ಭೂಮಿ ಹಸ್ತಾಂತರಿಸಿ ಅಧಿಸೂಚನೆ ಹೊರಡಿಸಿಲ್ಲ. ಜಿಲ್ಲಾಧಿಕಾರಿಗಳು ಪತ್ರ ಬರೆದ ಮಾತ್ರಕ್ಕೆ ಕೆಲಸ ಪೂರ್ಣಗೊಳ್ಳುವುದಿಲ್ಲ. ಸರ್ಕಾರದಿಂದ ಕೆಐಎಡಿಬಿಗೆ ಕಾನೂನುಬದ್ಧವಾಗಿ ಜಮೀನು ಹಸ್ತಾಂತರವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಎಆರ್‌ಎಐ ಘಟಕ ಸ್ಥಾಪನೆಗೆ ಅಗತ್ಯವಾದ ಬದ್ಧತೆಯನ್ನು ತಾನು ಈಗಾಗಲೇ ವ್ಯಕ್ತಪಡಿಸಿದ್ದು, ಈ ಸಂಬಂಧ ನಿರ್ದೇಶನವನ್ನೂ ನೀಡಿದ್ದೇನೆ. ರೈತರನ್ನು ಎತ್ತಿಕಟ್ಟುವ ಅಗತ್ಯ ನನಗಿಲ್ಲ. ಜಾಗ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಇರುವ ಸಮಸ್ಯೆಗಳನ್ನು ಸ್ಪಷ್ಟಪಡಿಸಿಕೊಂಡು ಪರಿಹರಿಸಬೇಕಾಗಿದೆ. ನನ್ನ ಕಡೆಯಿಂದ ಯಾವುದೇ ತಪ್ಪಾಗಲು ಅವಕಾಶವಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಕೇಂದ್ರದ ಬೃಹತ್ ಕೈಗಾರಿಕಾ ಇಲಾಖೆಯಿಂದ ನೇರವಾಗಿ ಕಾರ್ಖಾನೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಹೂಡಿಕೆದಾರರನ್ನು ಆಕರ್ಷಿಸಲು ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಯಾವ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂಬುದನ್ನು ಉದ್ಯಮಿಗಳೇ ನಿರ್ಧರಿಸುತ್ತಾರೆ ಎಂದರು.

ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ಅಲ್ಲಿನ ಸರ್ಕಾರ ಶೇ.50ರಷ್ಟು ವಿನಾಯಿತಿ ನೀಡುತ್ತಿದೆ. ಆದರೆ, ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪಿಸಲು ಜಾಗ ಕೇಳಿದರೆ ಬೇರೆ ರೀತಿಯ ಚರ್ಚೆಗಳು ನಡೆಯುತ್ತವೆ. ವೈಟ್ ಎಷ್ಟು, ಬ್ಲ್ಯಾಕ್ ಎಷ್ಟು ಎಂಬ ಮಾತುಗಳು ಕೇಳಿಬರುತ್ತವೆ. ಇಂತಹ ವಾತಾವರಣದಿಂದ ಉದ್ಯಮಿಗಳು ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನವರಿಗೆ ಅಭಿವೃದ್ಧಿಯ ಬಗ್ಗೆ ಆಸಕ್ತಿ ಇಲ್ಲ. ಸಣ್ಣ ಬಸ್ ನಿಲ್ದಾಣ ನಿರ್ಮಿಸುವುದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ. ಸಿಎಸ್‌ಆರ್ ಅನುದಾನದ ಬಗ್ಗೆಯೂ ಲಘುವಾಗಿ ಮಾತನಾಡುತ್ತಾರೆ. ನಾನು ರೈತರನ್ನು ಏಕೆ ಎತ್ತಿಕಟ್ಟಲಿ? ನನಗೆ ಬೇಕಿರುವುದು ಎಆರ್‌ಎಐ ಘಟಕ ಸ್ಥಾಪನೆಯಾಗಬೇಕು ಎಂಬ ಬದ್ಧತೆ ಮಾತ್ರ ಎಂದು ಸ್ಪಷ್ಟಪಡಿಸಿದರು.

ನಾವು ಬೆಳೆದುಬಿಟ್ಟಿದ್ದೇವೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ. ಆದರೆ, ಹಿಂದಿನವರು ಮಾಡಿದ ಅಭಿವೃದ್ಧಿ ಕಾರ್ಯಗಳ ಫಲವನ್ನು ಈಗಿನವರು ಅನುಭವಿಸುತ್ತಿದ್ದಾರೆ. ಹಿಂದಿನವರು ನಿರ್ಮಿಸಿದ ಅಭಿವೃದ್ಧಿಯ ಅಡಿಪಾಯದ ಮೇಲೆ ಕುಳಿತುಕೊಂಡು ಅದರ ಫಲವನ್ನು ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Share This Article